ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ನಿಗದಿಯಾಗಿದ್ದ ವಯೋಮಾನವನ್ನು ತಿದ್ದುಪಡಿ ಮಾಡುವ ಮಹತ್ವದ ತೀರ್ಮಾನವನ್ನು ಸಂಪುಟ ಸಭೆ ತೆಗೆದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದವರಿಗೆ ನಿಗದಿಪಡಿಸಿದ್ದ ವಯೋಮಿತಿಯನ್ನು ಸಡಿಲಿಕೆ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಸರ್ಕಾರದ ಶಿಕ್ಷಕರ ನೇಮಕಾತಿಗೆ ವಯೋಮಿತಿಯನ್ನು ಸಡಿಲಿಕೆ ಮಾಡಿರುವುದು ಮಹತ್ವ ಪಡೆದಿದೆ. ಇದರ ಜತೆಗೆ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಅರ್ಹತಾ ಪರೀಕ್ಷೆಗೆ ನಿಗದಿಯಾಗಿದ್ದ ಶೇ.60ರಷ್ಟು ಅಂಕಗಳನ್ನು ಸಡಿಲಿಕೆ ಮಾಡಿ ಶೇ.50 ಅಂಕಕ್ಕೆ ನಿಗದಿಪಡಿಸಲಾಗಿದೆ.
ಇನ್ನು ರಾಜ್ಯದಲ್ಲಿ 128 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನು 22.4ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಸಚಿವ ಸಂಪುಟ ತೀರ್ಮಾನಿಸಿದೆ. 300 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇದನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಅದರ ಮೊದಲ ಹಂತದಲ್ಲಿ 128 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇದನ್ನು ಸ್ಥಾಪಿಸಲಾಗುವುದು. ಈ ಕೇಂದ್ರಗಳಲ್ಲಿ ಮಹಿಳೆಯರಿಗೆ ನುರಿತ ಸರ್ಜನ್‍ಗಳು ಅಗತ್ಯವಾದ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಿದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ಹೊಸದಾಗಿ 650 ಹೊಸ ಡೀಸೆಲ್ ಬಸ್‌ಗಳನ್ನು ಖರೀದಿಸಲು 199.40 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದೇ ರೀತಿ ಬಿಎಂಟಿಸಿಯಲ್ಲಿ 840 ಬಿಎಸ್-6 ಬಸ್‍ಗಳನ್ನು ಖರೀದಿಸಲು 336 ಕೋಟಿ ಆಡಳಿತಾತ್ಮಕ ಅನುಮೋದನೆ ಕೊಡಲಾಗಿದೆ ಎಂದರು.
ಕರ್ನಾಟಕ 2022-27ನೇ ಸಾಲಿನ ಏರೋಸ್ಪೇಸ್ ಮತ್ತು ಡಿಫೆನ್ಸ್ ನಿಯಮಕ್ಕೆ ಸಂಪುಟ ಅನುಮೋದನೆ ಕೊಟ್ಟಿದೆ. ಇದರ ಪ್ರಕಾರ, ಇನ್ನು ಮುಂದೆ ರಕ್ಷಣಾ, ಬಾಹ್ಯಾಕಾಶ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ವಿಫುಲ ಅವಕಾಶ ನೀಡಲಾಗಿದೆ. ಕರ್ನಾಟಕವನ್ನು ಹೂಡಿಕೆದಾರರ ಹಬ್ ಮಾಡುವ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳ ಯೋಜನೆ ರೂಪಿಸಿ ಈ ನೀತಿಯನ್ನು ಜಾರಿಮಾಡಲಾಗಿದೆ. ಇದರಲ್ಲಿ ಒಟ್ಟು ನಾಲ್ಕು ವಿಭಾಗಗಳನ್ನು ಮಾಡಲಾಗಿದ್ದು, ಹೂಡಿಕೆದಾರರಿಗೆ ಹೆಚ್ಚಿನ ಸಬ್ಸಿಡಿ ನೀಡಲಾಗುವುದು.
ಕರ್ನಾಟಕ ರಾಜ್ಯ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮಗಳು 2020-22ಕ್ಕೂ ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ, ಇನ್ನು ಮುಂದೆ ಬಾಲಾಪರಾಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಮೊದಲು ವಿಚಾರಣೆಗೆ ಒಳಪಡಿಸಲಿದೆ.
ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸಿನಂತೆ ಪ್ರಾದೇಶಿಕ ಅಸಮತೋಲನ ನಿವಾರಿಸಲು ಹೊಸ ಅಭಿವೃದ್ಧಿ ಆಕಾಂಕ್ಷಿತ ತಾಲ್ಲೂಕುಗಳ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ. 102 ಅತಿ ಹಿಂದುಳಿದ ತಾಲ್ಲೂಕು 92 ಶೈಕ್ಷಣಿಕ ತಾಲ್ಲೂಕು ಸೇರಿದಂತೆ 50 ಹೊಸ ತಾಲ್ಲೂಕುಗಳು ಒಳಗೊಂಡಂತೆ ಮತ್ತಿತರ ಕಡೆ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಭೆಯಲ್ಲಿ ತೀರ್ಮಾನಿಸಿದೆ.
ರಾಜ್ಯ ಸರ್ಕಾರ ಕರ್ನಾಟಕ ಜಲ ನೀತಿಯನ್ನು ಜಾರಿಗೊಳಿಸಿದೆ. ಆಂಧ್ರ ಪ್ರದೇಶದ ಶ್ರೀಶೈಲದಲ್ಲಿ ಯಾತ್ರಿ ನಿವಾಸ ಕಟ್ಟಲು 85 ಕೋಟಿ ಆಡಳಿತಾತ್ಮಕ ಅನುಮೋದನೆ ಕೊಡಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಸ್‌ಸಿ-ಎಸ್‌ಟಿ, ಹಿಂದುಳಿದವರಿಗೆ ಮೀಸಲಾತಿ ನೀಡುವ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ ನೀಡಿದ್ದ ವರದಿಗೆ ಸಂಪುಟ ಅನುಮೋದಿಸಿದೆ.
PublicNext
12/08/2022 09:18 pm