ಬೆಂಗಳೂರು: ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತ ಡಾ. ಸಾಲುಮರದ ತಿಮ್ಮಕ್ಕ ಅವರು ತಮ್ಮ 111ರ ಜನ್ಮದಿನದ ಸಂಭ್ರಮದಲ್ಲಿ ಕರ್ನಾಟಕದ ಪರಿಸರ ರಾಯಬಾರಿಯಾಗಿದ್ದಾರೆ. ಜೊತೆಗೆ ಸಾಲುಮರದ ತಿಮ್ಮಕ್ಕ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಿ 'ಗ್ರೀನ್ ಅಂಬಾಸಿಡರ್' ಗೌರವ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಸಾಲುಮರದ ತಿಮ್ಮಕ್ಕನವರ 111ರ ಜನ್ಮದಿನದ ಸಂಭ್ರಮ ಹಾಗೂ ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದರು.
ಕರ್ಮದಿಂದ ಏನೆಲ್ಲ ಸಾಧನೆ ಮಾಡಲಿಕ್ಕೆ ಯಾವುದೇ ಪದವಿ ಬೇಕಿಲ್ಲ. ಯಾರ ನೆರವು ಬೇಕಿಲ್ಲ. ಯಾವ ಅವಕಾಶವೂ ಬೇಕಿಲ್ಲ. ಒಂದು ಧ್ಯೇಯ ಇದ್ದರೆ, ಕಾಯಕ ನಿಷ್ಠೆ ಮಾಡಿಕೊಂಡು ಸರ್ವರಿಗೂ ಒಳಿತು ಮಾಡುವ ಕೆಲಸ ಮಾಡಿದರೆ ಇಡೀ ಜಗತ್ತಿನಲ್ಲಿ ಬದಲಾವಣೆ ಮಾಡುವ ಪ್ರಭಾವಿಶಕ್ತಿ ಆಗಬಹುದು. ಎಂಬುದಕ್ಕೆ ನಮ್ಮ ಕರ್ನಾಟಕದಲ್ಲಿ, ನಮ್ಮ ನಡುವೆ ಇರುವುದು ಸಾಲುಮರದ ತಿಮ್ಮಕ್ಕ ಎಂದು ಪ್ರಶಂಸಿದರು.
ಜೀವನದಲ್ಲಿ ಎರಡು ಕೆಲಸ ಬಹಳ ಕಠಿಣ. ಹುಟ್ಟಿದಾಗ ಮುಗ್ಧತೆಯಿಂದ ಇರುತ್ತೇವೆ. ಮುಂದೆ ಮುಗ್ಧತೆಯನ್ನು ಕಳೆದುಕೊಳ್ಳುತ್ತೇವೆ. ಮುಗ್ಧತೆಯನ್ನು ಕೊನೆವರೆಗೂ ಇಟ್ಟುಕೊಳ್ಳುವುದು ಬಹಳ ಕಠಿಣ. ಸದಾ ಕಾಲ ಆತ್ಮಸಾಕ್ಷಿಯಿಂದ ನಡೆದುಕೊಳ್ಳುವುದು ಕಠಿಣ. ಈ ಎರಡು ಜಯಿಸಿದವರು ಬದುಕನ್ನು ಜಯಿಸಿದವರು ಮಾನವರಲ್ಲ, ದೇವ ಮಾನವರು. ಸಾಲು ಮರದ ತಿಮ್ಮಕ್ಕ ಅಜ್ಜಿ ಅವರ ಮುಖದಲ್ಲಿ ಮಗುವಿನ ಮುಗ್ಧತೆ ಇದೆ. ಅದು ಅವರ ಪ್ರಾಂಜಲವಾದ ಮನಸ್ಸು, ಶುದ್ಧ ಅಂತಃಕರಣದಿಂದ ಮಾಡಿರುವ ಕಾಯಕಯೋಗಿ. ಹೀಗಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸಾಲುಮರದ ತಿಮ್ಮಕ್ಕ ಅವರನ್ನು ಸ್ಮರಿಸಿದರು.
PublicNext
30/06/2022 04:20 pm