ಬೆಂಗಳೂರು: ಹೌದು... ದೇಶಾದ್ಯಂತ ಬಾಕಿ ಇರುವ ಸ್ಥಳೀಯ ಸಂಘ - ಸಂಸ್ಥೆಗಳ ಚುನಾವಣೆಯನ್ನು ಅತಿ ಶೀಘ್ರ ದಲ್ಲಿ ನಡೆಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದೆ.
ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಿಬಿಎಂಪಿ ಚುನಾವಣೆ ಪ್ರಕ್ರಿಯೆಗೆ ಸುಪ್ರೀಂ ಆದೇಶದಿಂದ ಮತ್ತೆ ಜೀವ ಬಂದಂತಾಗಿದೆ. ಎರಡು ವರ್ಷಗಳಿಂದ ಅಧಿಕಾರವಿಲ್ಲದೇ ಚಡಪಡಿಸುತ್ತಿರುವ ಮಾಜಿ ಕಾರ್ಪೊರೇಟರ್ ಗಳಲ್ಲಿ ಸುಪ್ರೀಂ ಆದೇಶ ವಿದ್ಯುತ್ ಸಂಚಾರ ಉಂಟು ಮಾಡಿದೆ. ಆದರೆ, ಬೆಂಗಳೂರು ಶಾಸಕರಿಗೆ ಮಾತ್ರ ಇದೊಂದು ತಲೆನೋವಾಗಿ ಪರಿಣಮಿಸಿದೆ.
ಯಾಕೆಂದರೆ ಅವರ ಹಿಂಬಾಲಕರನೇಕರು ಬಿಬಿಎಂಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಒಂದೊಂದು ವಾರ್ಡ್ ಗೂ 10-15 ಮಂದಿ ಆಕಾಂಕ್ಷಿಗಳಿದ್ದಾರೆ. ಟಿಕೆಟ್ ಆಸೆ ಹೊತ್ತು ಬರುವ ಎಲ್ಲರ ಮೂಗಿಗೂ ತುಪ್ಪ ಸವರಿ ಸಾಗ ಹಾಕುತ್ತಿದ್ದ ಶಾಸಕರಿಗೆ ಹಾಗೂ ಹೀಗೂ ವಿಧಾನಸಭೆ ಚುನಾವಣೆ ತನಕ ಇದನ್ನೇ ಮುಂದುವರೆಸಿಕೊಂಡು ಹೋಗುವ ಇರಾದೆ ಇದ್ದ ಅನೇಕ ಶಾಸಕರಿಗೆ ಇದೀಗ ಸುಪ್ರೀಂ ಆದೇಶ ಒಂದು ರೀತಿ ಶಾಕ್ ನೀಡಿದಂತೆ ಆಗಿದೆ. ಹಾಗಾಗಿ ಏನಾದರೂ ಮಾಡಿ ಮತ್ತೆ ಚುನಾವಣೆಯನ್ನು ಮುಂದೂಡುವ ಉಪಾಯಕ್ಕೆ ಮತ್ತೆ ಪಕ್ಕಾಗಿದ್ಧಾರೆ ಬೆಂಗಳೂರು ಶಾಸಕರು.
PublicNext
11/05/2022 06:04 pm