ಅಮರಾವತಿ: ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ ಅವರ ಕುಟುಂಬಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ ಅವರು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಆಗಿದ್ದರು. ಮೂಲತಃ ಆಂಧ್ರಪ್ರದೇಶದ ಚಿತ್ತೂರು ಮೂಲದ ಸಾಯಿ ತೇಜಾ, 2013ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್‍ಗೆ ಸೇರಿದ್ದರು. ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ಅವರಿಗೆ ಕೇವಲ 27 ವರ್ಷ ವಯಸ್ಸಾಗಿತ್ತು.
ವೆಲ್ಲಿಂಗ್ಟನ್ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಬಿಪಿನ್ ರಾವತ್ ತೆರಳುತ್ತಿದ್ದ ಸಂದರ್ಭದಲ್ಲಿ 14 ಮಂದಿಯಲ್ಲಿ ಸಾಯಿ ತೇಜಾ ಅವರು ಪ್ರಯಾಣಿಸುತ್ತಿದ್ದರು. ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ತೆರಳುವಾಗ ಮಧ್ಯಾಹ್ನದ ವೇಳೆಗೆ ನಡೆದ ದುರಂತದಲ್ಲಿ 13 ಮಂದಿ ಸಾವನ್ನಪ್ಪಿದ್ದರು.
ಸೈನಿಕರ ಜೀವಕ್ಕೆ ಬೆಲೆ ಕಟ್ಟುವ ಭಾವನೆ ಬಾರದಂತೆ, ಯಾವುದೇ ಪ್ರಚಾರ ಇಲ್ಲದೇ ನೇರವಾಗಿ ಸಚಿವರು ಹಾಗೂ ಅಧಿಕಾರಿಗಳು ಕುಟುಂಬಸ್ಥರ ಬಳಿ ತೆರಳಿ ಪರಿಹಾರ ಹಣ ನೀಡಬೇಕಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಯಾವುದೇ ವಿಡಿಯೋ ಪ್ರಚಾರ ಆಗೋದು ಬೇಡ ಎಂದು ಸಿಎಂ ಜಗನ್ ತಿಳಿಸಿದ್ದರು ಎನ್ನಲಾಗಿದೆ.
PublicNext
11/12/2021 04:52 pm