ಕೊಪ್ಪಳ: ನಾನು ಕನಸಿನಲ್ಲಿ ಕೂಡ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವನಾಗುತ್ತೇನೆ ಎಂದು ಭಾವಿಸಿರಲಿಲ್ಲ.ಇದೆಲ್ಲ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಯ ಫಲ ಎಂದು ಕೊಪ್ಪಳ ಉಸ್ತುವಾರಿಗಳೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ, ಕೊಪ್ಪಳ ಜಿಲ್ಲೆಯ ಆರಾಧ್ಯ ದೈವ, ಜ್ಞಾನಜ್ಯೋತಿ, ಕಾಯಕಯೋಗಿ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು. ಜಾತ್ರಾ ಮಹೋತ್ಸವಕ್ಕೆ ಇಂದು ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಕೊಪ್ಪಳ ಜಿಲ್ಲೆಯ ಉಸ್ತುವಾರಿಯಾಗದೇ ಹೋಗಿದ್ದರೆ ಈ ಸ್ವಾಮಿಯ ಜಾತ್ರೆ ನೋಡಲು ಸಾಧ್ಯವಾಗುತ್ತಿರಲಿಲ್ಲ. ಕೊಪ್ಪಳ ಉಸ್ತುವಾರಿಯಾಗಿರುವುದು ಪೂರ್ವನಜನ್ಮದ ಪುಣ್ಯ. ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಸಾಧಾರಣ ಜಾತ್ರೆಯಲ್ಲ. ಇತಿಹಾಸ ಪರಂಪರೆಯುಳ್ಳ ಜಾತ್ರೆಯಾಗಿರುವುದರಿಂದ ಲಕ್ಷ ಜನಸ್ತೋಮ ಸೇರುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಜಗತ್ತಿಗೆ ಅಂಟಿರುವ ತಲ್ಲಣಗೊಳಿಸಿರುವ ಕೋವಿಡ್ ಸೋಂಕಿನ ಕಾರಣದಿಂದಾಗಿ ಸರಳವಾಗಿ ಜಾತ್ರೆ ನಡೆಸಲು ಸ್ವಾಮೀಜಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸಲಾಯಿತು.
PublicNext
30/01/2021 02:48 pm