ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಅನುಕೂಲವಾಗದ ಮತ್ತು ಅವರ ಅಭಿವೃದ್ಧಿಗೆ ಪೂರಕವಾಗದ ಹಾಗೂ ಫಲಾನುಭವಿಗಳೇ ಇಲ್ಲದ ಕಾಮಗಾರಿಗಳನ್ನು ನಿರ್ವಹಿಸುವ ಮೂಲಕ ಕುಷ್ಟಗಿ ಉಪ ವಿಭಾಗ, ಕೃಷ್ಣ ಭಾಗ್ಯ ಜಲ ನಿಗಮದಲ್ಲಿ 1,136.63 ಕೋಟಿ ರು. ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಮೇಲ್ನೋಟಕ್ಕೆ ನಿಜವಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯು ಒಪ್ಪಿಕೊಂಡಿರುವುದು ಇದೀಗ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎಂದು ಹೇಳಲಾಗಿರುವ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್ ಎಂ ಚಿಣಿ ಅವರ ವಿರುದ್ಧದ ಆರೋಪಗಳು ಮತ್ತು ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ವಿವರವಾದ ತನಿಖೆ ನಡೆಸಲು ಇಲಾಖೆಯು ಕ್ರಮ ಕೈಗೊಂಡಿದೆ. ಅಲ್ಲದೆ ಇಡೀ ಪ್ರಕರಣದ ಕುರಿತು ತನಿಖೆ ನಡೆಸಲು ಜಲ ಸಂಪನ್ಮೂಲ ಇಲಾಖೆಯ ವಿಚಕ್ಷಣಾ ದಳಕ್ಕೆ ವಹಿಸಿ 2022ರ ಫೆ.16ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ. ತನಿಖೆ ನಡೆಸಲು ಹೊರಡಿಸಿರುವ ಆದೇಶದ ಪ್ರತಿ ಆದೇಶದಲ್ಲೇನಿದೆ? ಸಣ್ಣ ನೀರಾವರಿ ಇಲಾಖೆಯ ಕುಷ್ಟಗಿ ವಿಭಾಗದಲ್ಲಿ ಎಸ್ ಸಿ ಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ಕಳಪೆ ಗುಣಮಟ್ಟದ ಚೆಕ್ ಡ್ಯಾಂಗಳನ್ನು ನಿರ್ಮಿಸಿರುವ ಮತ್ತು ಯಾವುದೇ ಚೆಕ್ ಡ್ಯಾಂ ನಿರ್ಮಿಸದೇ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಸುಮಾರು 50.00 ಕೋಟಿ ರು. ಅನುದಾನವನ್ನು ದುರ್ಬಳಕೆ ಮಾಡಲಾಗಿದೆ. ಕೃಷ್ಣಾ ಭಾಗ್ಯ ಜಲನಿಗಮದಲ್ಲಿ 2019-20ರವರೆಗೆ ಬಳಕೆಯಾಗದೇ ಉಳಿದಿದ್ದ 401.77ಕೋಟಿ ಹಾಗೂ 2020-21ನೇ ಸಾಲಿನಲ್ಲಿ ಬಿಡುಗಡೆಯಾದ 384.86 ಕೋಟಿ ರು. ಹಣವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸಂಬಂಧ ಪಡೆದ ಇತರೆ ಕಾಮಗಾರಿಗಳಿಗೆ ಉಪಯೋಗಿಸಿಕೊಳ್ಳಲಾಗಿದೆ.
ಈ ಗುತ್ತಿಗೆಯನ್ನು ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿ ಸ್ವಜಾತಿ ಮತ್ತು ತಮ್ಮ ಸಂಬಂಧಿ ಗುತ್ತಿಗೆದಾರರಿಗೆ ನೀಡಿ ನೂರಾರು ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂಬ ಆಪಾದನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜೆಯಲ್ಲಿ ಭೂ ಸ್ವಾಧೀನ ಹಾಗೂ ಪುನರ್ ವಸತಿ, ಪುನರ್ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ 2017-18 ಮತ್ತು 2018-19ನೇ ಸಾಲಿನಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಾಗಿ ಮೀಸಲಿರಿಸಿದ್ದ 300 ಕೋಟಿ ರು.ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸಂಬಂಧಪಡದ ಕಾಮಗಾರಿಗಳಿಗೆ ಪಾವತಿಸಿ ಕರ್ತವ್ಯ ಲೋಪವೆಸಗಿ ಭ್ರಷ್ಟಾಚಾರ ಮಾಡಿರುವ ಆರೋಪಗಳು ಮೇಲ್ನೋಟಕ್ಕೆ ನಿಜವೆಂದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ವಿವರವಾದ ತನಿಖೆ ಕೈಗೊಳ್ಳುವುದು ಅವಶ್ಯಕವಾಗಿದೆ. ಹೀಗಾಗಿ ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿ ವಿವರವಾದ ತನಿಖೆ ನಡೆಸಿ ತಕ್ಷಣವೇ ಸರ್ಕಾರಕ್ಕೆ ವರದಿ ಸಲ್ಲಿಸಲು ಪ್ರಕರಣವನ್ನು ಜಲಸಂಪನ್ಮೂಲ ಇಲಾಖೆಯ ವಿಚಕ್ಷಣಾ ದಳಕ್ಕೆ ವಹಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಈ ಆದೇಶವನ್ನು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಅನುಮೋದಿಸಿದ್ದಾರೆ.
ಕೃಷ್ಣಾಭಾಗ್ಯ ಜಲನಿಗಮದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅನುದಾನ ಮಾರ್ಗಪಲ್ಲಟಗೊಳಿಸಿರುವ ಸಂಬಂಧ ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ ಭವಾನಿ ಮಠ ಎಂಬುವರು ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಆಯೋಗವು ಸರ್ಕಾರಕ್ಕೆ ಸೂಚಿಸಿತ್ತು. 850 ಕೋಟಿ ದುರ್ಬಳಕೆ 2017-18ನೇ ಸಾಲಿನಿಂದ ಕೃಷ್ಣ ಭಾಗ್ಯ ಜಲನಿಗಮದಲ್ಲಿ ಭೂ ಸ್ವಾಧೀನ ಮತ್ತು ಪುನರ್‌ವಸತಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅನುಷ್ಠಾನಗೊಳಿಸಲು ಪ್ರತ್ಯೇಕ ಲೆಕ್ಕಶೀರ್ಷಿಕೆಯಡಿ ಎಸ್‌ಸಿಸಪಿ ಟಿಎಸ್‌ಪಿ ಯೋಜನೆ ಒಳಗೊಂಡಂತೆ ಅನುದಾನ ಕಲ್ಪಿಸಲಾಗಿದೆ. ಆದರೆ ಇದುವರೆಗೂ ಎಸ್‌ಸಿ ಎಸ್‌ಟಿ ಸಮುದಾಯಗಳಿಗೆ ಮನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅನುದಾನವನ್ನು ಖರ್ಚು ಮಾಡಿಲ್ಲ ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದರು. 2017-18ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಬಿಡುಗಡೆ ಮಾಡಲಾದ ಅನುದಾನ 631.59 ಕೋಟಿ ಪೈಕಿ 214.16 ಕೋಟಿ ರು. 7(ಡಿ) ಅಡಿ ವೆಚ್ಚ ಮಾಡಲಾಗಿದೆ. ಇದಲ್ಲದೆ 91 ಕೋಟಿ ರು.,ನಲ್ಲಿ ರಸ್ತೆ, ಚರಂಡಿ, ಸಮುದಾಯ ಭವನ ಕಾಮಗಾರಿಗಳಿಗೆ ಅನಮೋದನೆ ನೀಡಲಾಗಿದೆ. ಒಟ್ಟು 305.10 ಕೋಟಿ ಅನುದಾನ ಉಪಯೋಗಿಸಲಾಗಿದೆ. ಆದರೆ ಕಳೆದ 2 ವರ್ಷಗಳಿಂದ ಮನೆಗಳ ನಿರ್ಮಾಣದ ಕುರಿತು ಫಲಾನುಭವಿಗಳ ಪಟ್ಟಿಯನ್ನು ಸಂಬಂಧದಪಟ್ಟ ವಿಭಾಗದಿಂದ ಮತ್ತು ಸಕ್ಷಮ ಪ್ರಾಧಿಕಾರದಿಂದ ಅಂತಿಮಗೊಳಿಸದೇ ಇರುವುದರಿಂದ ಈ ಮನೆಗಳ ನಿರ್ಮಾಣಕ್ಕಾಗಿ ಇನ್ನೂ ಸಹ ಟೆಂಡರ್ ಕರೆದಿಲ್ಲ ಹೀಗಾಗಿ ಅನುದಾನ ಖರ್ಚು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಭವಾನಿಮಠ ಅವರು ದೂರಿನಲ್ಲಿ ವಿವರಿಸಿದ್ದರು. ಈ ಪ್ರಕರಣದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಎಲ್ಲಾ ನಿಯಮಾವಳಿಗಳನ್ನು ಮತ್ತು ಕಾನೂನುಗಳನ್ನು ಅತ್ಯಂತ ಚಾಣಾಕ್ಷತನದಿಂದ ಉಲ್ಲಂಘಿಸಲಾಗಿದೆ. 401.77ಕೋಟಿ ಮತ್ತು 384.86 ಕೋಟಿ ರು.ಗಳ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಯಾವುದೇ ಅನುಕೂಲವಾಗದ ಅವರ ಅಭಿವೃದ್ಧಿಗೆ ಪೂರಕವಾಗದ ಮತ್ತು ಫಲಾನುಭವಿಗಳೇ ಇಲ್ಲದ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ ಎಂಬ ದೂರಿದ್ದರು.
-ಜಿ ಮಹಂತೇಶ್
ಕೃಪೆ- ದಿ ಫೈಲ್
PublicNext
05/04/2022 04:02 pm