ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ಬಿಟ್ ಕಾಯಿನ್ ಮತ್ತು ಡ್ರಗ್ಸ್ ದಂಧೆಯ ಕಿಂಗ್ ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಹೋಟೆಲ್ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
ಬೆಂಗಳೂರಿನ ಜೀವನ್ ಭಿಮಾ ನಗರದ ಪಂಚತಾರಾ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದ ಶ್ರೀಕಿ ಮತ್ತು ಆತನ ಸಹಚರ ವಿಷ್ಣು ಭಟ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಜೀವನ್ ಭಿಮಾ ನಗರದ ಪೊಲೀಸರು ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ಮತ್ತು ಆತನ ಸಹಚರ ವಿಷ್ಣು ಭಟ್ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸಹಚರ ವಿಷ್ಣು ಭಟ್‌ನನ್ನು ನಾಲ್ಕು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಹೋಟೆಲ್ ವ್ಯವಸ್ಥಾಪಕರು ನೀಡಿದ ದೂರಿನ ಮೇಲೆ ಆರೋಪಿಗಳನ್ನು ಬಂಧಿಸಿದ್ದು ಪೊಲೀಸರು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಆರೋಪಿಗಳು ಮಾದಕ ದ್ರವ್ಯ ಸೇವಿಸಿದ್ದು ಗೊತ್ತಾಗಿತ್ತು. ಆ ಹಿನ್ನೆಲೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಂಡು, ಇಬ್ಬರ ಮನೆಗಳ ಮೇಲೂ ದಾಳಿ ಮಾಡಿದ್ದರು. ಆ ದಾಳಿ ವೇಳೆ ಡ್ರಗ್ಸ್ ಪತ್ತೆಯಾಗಿರುವುದಾಗಿಯೂ ಪೊಲೀಸರು ಹೇಳಿದ್ದರು.
ಇದಿಷ್ಟು ಸುದ್ದಿ. ಆದರೆ, ಸಾವಿರಾರು ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಹ್ಯಾಕಿಂಗ್ ದಂಧೆಕೋರನನ್ನು ಈ ಹಿಂದೆ ಕೂಡ ಬಂಧಿಸಿದ್ದ ಪೊಲೀಸರು, ಮಾದಕವಸ್ತು ಮತ್ತು ಸೈಬರ್ ಕ್ರೈಮ್ ಕಾನೂನಿನಡಿ ಸಾಮಾನ್ಯ ಸೈಬರ್ ವಂಚನೆ ಪ್ರಕರಣ ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಆದರೆ, ಆತ ಕೇಂದ್ರ ಸರ್ಕಾರದ ಜನ್ ಧನ್ ಯೋಜನೆ ಖಾತೆ, ರಾಜ್ಯ ಸರ್ಕಾರದ ಹಲವು ಇ ಪೇಮೆಂಟ್ ಖಾತೆಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ದೋಚಿರುವ ಮತ್ತು ಅಂತಾರಾಷ್ಟ್ರೀಯ ಗೇಮಿಂಗ್ ಮತ್ತು ಕ್ರಿಪ್ಟೊಕರೆನ್ಸಿ ಜಾಲತಾಣಗಳನ್ನು ಹ್ಯಾಕ್ ಮಾಡಿ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ದೋಚಿರುವ ಸಂಗತಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿತ್ತು.
ಅಲ್ಲದೆ, ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಶ್ರೀಕಿ ವಿರುದ್ಧದ ದೋಷಾರೋಪ ಪಟ್ಟಿಯಲ್ಲಿ ಕೂಡ ಆತನ ಸಾವಿರಾರು ಕೋಟಿ ರೂಪಾಯಿ ವಂಚನೆಯ ಜಾಲದ ಕುರಿತು ವಿವರಿಸಿದ್ದರು. ಈ ನಡುವೆ, ಸಾವಿರಾರು ಕೋಟಿ ಮೌಲ್ಯದ ಬಿಟ್ ಕಾಯಿನ್ ದೋಚಲು ಆತ ಸ್ವತಃ ಸಿಸಿಬಿ ಸೇರಿದಂತೆ ಪೊಲೀಸರ ಲ್ಯಾಪ್ ಟಾಪ್ ಮತ್ತು ಕಂಪ್ಯೂಟರುಗಳನ್ನೇ ಬಳಸಿಕೊಂಡಿದ್ದ ಎಂಬ ಆಘಾತಕಾರಿ ಸಂಗತಿ ಕೂಡ ಈಗ ಬಯಲಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದ ತನಿಖಾ ಸಂಸ್ಥೆಗಳ ಕಂಪ್ಯೂಟರುಗಳನ್ನೇ ಬಳಸಿಕೊಂಡು ಆತ ಹ್ಯಾಕ್ ಮಾಡಿದ ಭಾರೀ ಮೊತ್ತದ ಬಿಟ್ ಕಾಯಿನ್ ಗಳನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾಯಿಸಿದ್ದ ಎಂಬ ಸಂಗತಿ ಬಯಲಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ಕೆಲವು ಮೂಲಗಳ ಪ್ರಕಾರ ಆತನ ವಿರುದ್ಧ ತನಿಖೆಯ ನೇತೃತ್ವ ವಹಿಸಿದ್ದ ಉನ್ನತಾಧಿಕಾರಿಗಳು ಮತ್ತು ಪ್ರಭಾವಿ ರಾಜಕಾರಣಿಗಳೇ ಆತನನ್ನು ಬಳಸಿಕೊಂಡು ಭಾರೀ ದಂಧೆ ಮಾಡಿದ್ದಾರೆ. ಆತನಿಗೆ ಇಲಾಖೆಯ ಕಂಪ್ಯೂಟರ್ ಮತ್ತು ಲ್ಯಾಪ್ ಬಳಕೆಗೆ ಅವಕಾಶ ನೀಡಿ, ಆತನನ್ನು ದಾಳವಾಗಿ ಬಳಸಿಕೊಂಡು ಸ್ವತಃ ಭಾರೀ ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ವಾದದ ಪ್ರಕಾರ, ಆತ ಸಾವಿರಾರು ಕೋಟಿ ಬಿಟ್ ಕಾಯಿನ್ ಹ್ಯಾಕ್ ಮಾಡಲು ಬಳಸಿದ ಅಸಲಿ ಕಂಪ್ಯೂಟರುಗಳ ಐಪಿ ಅಡ್ರೆಸ್ ಅಳಿಸಿ, ತನ್ನ ವಿರುದ್ಧ ತನಿಖೆ ನಡೆಸುತ್ತಿದ್ದ ಪೊಲೀಸರು ಬಳಸುವ ಐಪಿ ಅಡ್ರೆಸ್ ಹಾಕಿದ್ದಾನೆ. ಅದು ತನಿಖೆಯನ್ನು ಹಾದಿತಪ್ಪಿಸುವ ಕುತಂತ್ರ ಎಂದೂ ಹೇಳಲಾಗುತ್ತಿದೆ.
ಆದರೆ, ಶ್ರೀಕೃಷ್ಣ ಎಂಬ ಈ ಅಂತಾರಾಷ್ಟ್ರೀಯ ಹ್ಯಾಕರ್ ಡ್ರಗ್ಸ್ ಪ್ರಕರಣದಲ್ಲಿ ಮೊದಲ ಬಾರಿಗೆ ಪೊಲೀಸರ ಅತಿಥಿಯಾದ ಬಳಿಕ ಈವರೆಗೆ ಆತ ಯಾವೆಲ್ಲಾ ಹ್ಯಾಕ್ ಮಾಡಿದ್ದಾನೆ? ಎಷ್ಟು ಬಿಟ್ ಕಾಯಿನ್ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿದಂತೆ ಯಾವೆಲ್ಲಾ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದಾನೆ? ಎಷ್ಟು ಹಣ ದೋಚಿದ್ದಾನೆ. ಮತ್ತು ಹಾಗೆ ದೋಚಿದ ಬಿಟ್ ಕಾಯಿನ್ ಮತ್ತು ಹಣ ಯಾವೆಲ್ಲಾ ಖಾತೆಗಳಿಗೆ ವರ್ಗಾವಣೆಯಾಗಿದೆ? ಯಾವ ದಿನಾಂಕದಂದು ಆ ವಹಿವಾಟುಗಳು ನಡೆದಿವೆ ಎಂಬ ಮಾಹಿತಿಯನ್ನು ಬೆನ್ನಿತ್ತಿದರೆ ಆರೋಪಿ ಸ್ವತಃ ವಂಚನೆ ಎಸಗಿದ್ದನೆ ಅಥವಾ ಆತನನ್ನು ಬಳಸಿಕೊಂಡು ಬೇಲಿಯೇ ಎದ್ದು ಹೊಲ ಮೇಯ್ದಿದೆಯೇ ಎಂಬುದು ಬಯಲಾಗದೇ ಇರದು.
ಜೊತೆಗೆ ಆತನೊಂದಿಗೆ ಬಂಧಿತನಾಗಿರುವ ವಿಷ್ಣುಭಟ್ ಸೇರಿದಂತೆ ಶ್ರೀಕಿಯ ಸಹಚರರು ಮತ್ತು ಅವರ ಹಿನ್ನೆಲೆ, ಅವರ ಸಂಪರ್ಕಗಳನ್ನು ಬಯಲು ಮಾಡಿದರೆ, ಈ ಬಹುಕೋಟಿ ಅಂತಾರಾಷ್ಟ್ರೀಯ ವಂಚನೆಯ ಹಿಂದೆ ಅಧಿಕಾರಸ್ಥ ರಾಜಕಾರಣಿಗಳು ಮತ್ತು ಅವರ ಕುಟುಂಬದವರ ಪಾಲು ಎಷ್ಟು ಎಂಬುದು ಕೂಡ ಗೊತ್ತಾಗಲಿದೆ.
ಅದರಲ್ಲೂ ಹಲವು ತಿಂಗಳುಗಳಿಂದ ಜಾಮೀನಿನ ಮೇಲೆ ರಾಜಾರೋಷವಾಗಿ ಓಡಾಡಿಕೊಂಡಿದ್ದ ಮತ್ತು ಐಷಾರಾಮಿ ಹೋಟೆಲುಗಳಲ್ಲಿ ಮೋಜುಮಸ್ತಿಯಲ್ಲಿ ಮುಳುಗಿದ್ದ ಮಾದಕ ದ್ರವ್ಯ ವ್ಯಸನಿ ಶ್ರೀಕಿಯನ್ನು ಇಷ್ಟು ದಿನ ಮುಕ್ತವಾಗಿ ಬಿಟ್ಟು, ಇದೀಗ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು ಮತ್ತು ಮಾಧ್ಯಮಗಳ ಒತ್ತಡ ಹೆಚ್ಚುತ್ತಿದ್ದಂತೆ ದಿಢೀರನೇ ಹಲ್ಲೆ ಘಟನೆಯ ನೆಪದಲ್ಲಿ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರ ಕ್ರಮ ಕೂಡ ಅನುಮಾನಕ್ಕೆ ಈಡಾಗಿದೆ.
ಆತನನ್ನು ಬಂಧಿಸುವುದೇ ಆಗಿದ್ದರೆ, ಕೇಂದ್ರ ಸರ್ಕಾರದ ಜನ್ ಧನ್ ಖಾತೆ, ರಾಜ್ಯ ಸರ್ಕಾರದ ಇಪೇಮೆಂಟ್ ಖಾತೆಗಳಿಗೆ ಕನ್ನ ಹಾಕಿದ ಪ್ರಕರಣಗಳೇ ಸಾಕಿದ್ದವು. ಆದರೆ, ಅಂತಹ ಮಹಾ ವಂಚನೆಯ ಪ್ರಕರಣಗಳಲ್ಲಿ ಸಾಮಾನ್ಯ ಸೈಬರ್ ಕ್ರೈಮ್ ಕೇಸು ಜಡಿದು ಬೀದಿಗೆ ಬಿಟ್ಟಿದ್ದ ಬೆಂಗಳೂರು ಪೊಲೀಸರು, ಇದೀಗ ಮಾಧ್ಯಮಗಳು ಮತ್ತು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳ ಕಣ್ಣು ಆತನ ಮೇಲೆ ಬೀಳುತ್ತಲೇ ಆತನನ್ನು ಕಂಬಿಯ ಹಿಂದೆ ಕಳಿಸಿರುವುದು ಯಾರ ರಕ್ಷಣೆಗಾಗಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಹಾಗಾಗಿ, ಬಿಟ್ ಕಾಯಿನ್ ಮತ್ತು ಡ್ರಗ್ಸ್ ಪ್ರಕರಣದ ವಿಷಯದಲ್ಲಿ ಸರ್ಕಾರ, ಪೊಲೀಸ್ ಮತ್ತು ತನಿಖಾ ಸಂಸ್ಥೆಗಳ ಪ್ರತಿ ನಡೆಯೂ ಪ್ರಕರಣವನ್ನು ಪೂರಾ ಬಯಲಿಗೆಳೆಯುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಬದಲಾಗಿ, ಏನನ್ನೋ, ಯಾರನ್ನೋ ಬಚಾವು ಮಾಡುವ ನಡೆಯಂತೆ ಗೋಚರಿಸತೊಡಗಿವೆ.
ಕೃಪೆ- "ಪ್ರತಿ ಧ್ವನಿ"
PublicNext
10/11/2021 11:31 am