ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ಗೂ ಡ್ರಗ್ಸ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಆರ್ಯನ್‌ರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರನ್ನು ಬಂಧಿಸಿರಲಿಲ್ಲ. ಬದಲಾಗಿ ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ.
ಮುಂಬೈನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಎನ್‌ಸಿಬಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಸಮೀರ್ ವಾಂಖೇಡೆ ಹಾಗೂ ಅವರ ಕೆಳಗಿನ ಅಧಿಕಾರಿಗಳಾದ ಆಶಿಕ್ ರಂಜನ್, ವಿವಿ ಸಿಂಗ್ ಹಾಗೂ ಕಾರು ಚಾಲಕ ಕೂಡ ಇದಕ್ಕೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊದಲಿಗೆ 25 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿದೆ. ನಂತರ 18 ಕೋಟಿಗೆ ವ್ಯವಹಾರ ಕುದುರಿಸಲಾಗಿದೆ. ಆರಂಭದಲ್ಲಿ ಐವತ್ತು ಲಕ್ಷ ಹಣ ಸಂದಾಯವಾಗಿದೆ. ಎನ್‌ಸಿಬಿ ಅಧಿಕಾರಿ ವಾಂಖೇಡೆ ಅವರಿಗೆ ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಅವರು ಆಪ್ತರಾಗಿದ್ದಾರೆ ಎಂದು ಬೊಟ್ಟು ಮಾಡಿರುವ ನವಾಬ್ ಮಲಿಕ್, ಕಾಂಬೋಜ್ ಅವರ ಸೋದರ ಸಂಬಂಧಿ ರಿಷಬ್ ಸಚ್‌ದೇವ್ ಮೇಲೂ ಆರೋಪ ಮಾಡಿದ್ದಾರೆ.
ಆರ್ಯನ್ ಖಾನ್ ಐಷಾರಾಮಿ ಹಡಗಿನಲ್ಲಿ ಪಾರ್ಟಿ ಮಾಡಲು ಹೋಗಿಲ್ಲ. ಹಾಗೂ ಅವರು ಅದಕ್ಕಾಗಿ ಟಿಕೆಟ್ ಖರೀದಿಸಿರಲಿಲ್ಲ. ಪ್ರತೀಕ್ ಗಾಬಾ ಮತ್ತು ಅಮೀರ್ ಫರ್ನಚರ್ ವಾಲಾ ಅವರು ಆರ್ಯನ್‌ರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಒಟ್ಟಾರೆ ಪ್ರಕರಣದ ರೂವಾರಿ ಹಾಗು ಮಾಸ್ಟರ್ ಮೈಂಡ್ ಎಂದರೆ ಅದು ಮೋಹಿತ್ ಕಾಂಬೋಜ್ ಎಂದು ನವಾಬ್ ಮಲಿಕ್ ಆರೋಪಿಸಿದ್ದಾರೆ.
PublicNext
07/11/2021 02:34 pm