ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ಎಂದೇ ಹೆಸರಾಗಿರುವ ನಟಿ ರಮ್ಯಾ ಚಿತ್ರರಂಗದಿಂದ ದೂರವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಒಂದು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದ ರಮ್ಯಾ ಬಳಿಕ ಅಲ್ಲಿಂದಲೂ ದೂರವಾಗಿದ್ದಾರೆ. ಆದರೆ ಇದೀಗ ಅವರೇ ಹೇಳಿರುವಂತೆ ರಮ್ಯಾ ಮತ್ತೆ ಬೆಳ್ಳಿ ತೆರೆಯ ಮೇಲೆ ಬರಲು ಸಜ್ಜಾಗುತ್ತಿದ್ದಾರೆ.
2003 ರಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ 'ಅಭಿ' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಮ್ಯಾ ಒಂದು ದಶಕ ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದರು. ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡರು.
ಆದರೆ 2012 ರಲ್ಲಿ ರಾಜಕೀಯ ಪ್ರವೇಶಿಸಿದ ಬಳಿಕ ಚಿತ್ರರಂಗದಿಂದ ನಿಧಾನಕ್ಕೆ ನಂಟು ಕಳೆದುಕೊಂಡರು ರಮ್ಯಾ. 2012 ರಲ್ಲಿ ನಾಲ್ಕು ಸಿನಿಮಾದಲ್ಲಿ ನಟಿಸಿದ್ದ ರಮ್ಯಾ ಬಳಿಕ 2014 ರಲ್ಲಿ ಒಂದು ಹಾಗೂ 2016 ರಲ್ಲಿ ಒಂದು ಸಿನಿಮಾದಲ್ಲಷ್ಟೆ ನಟಿಸಿದರು. ಆದರೆ ಇದೀಗ ರಮ್ಯಾ ಮತ್ತೆ ನಟನೆ ಕಡೆಗೆ ಮರಳುವ ಉತ್ಸಾಹದಲ್ಲಿದ್ದಾರೆ ಅದಕ್ಕಾಗಿ ತಯಾರಿಯನ್ನೂ ಆರಂಭಿಸಿದ್ದಾರೆ.
ರಾಜಕಾರಣಿ, ಉದ್ಯಮಿ ಆದಿಕೇಶವಲು ಮೊಮ್ಮಗ ಆದಿನಾರಾಯಣ, ಲಾರಾ ಹೆಸರಿನ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಕೊಂದ ಘಟನೆಯನ್ನು ಖಂಡಿಸಿದ್ದ ನಟಿ ರಮ್ಯಾ, ಮಂಗಳವಾರ ನಡೆದ ನಾಯಿ ಲಾರಾಳ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಈ ಸಮಯ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸಿನಿಮಾ ರಂಗಕ್ಕೆ ಮರಳುವುದಾಗಿ ಹೇಳಿದ್ದಾರೆ.
PublicNext
02/02/2022 06:11 pm