ಬೆಂಗಳೂರು: ಪೇಜಾವರ ಶ್ರೀಗಳ ಕುರಿತು ಖ್ಯಾತ ಸಂಗೀತ ನಿರ್ದೇಶಕ, ಸಿನಿಮಾ ಸಾಹಿತಿ ನಾದಬ್ರಹ್ಮ ಹಂಸಲೇಖ ಅವರು ನೀಡಿದ ಹೇಳಿಕೆಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಹಂಸಲೇಖ ಅವರು ಕ್ಷಮೆಯಾಚಿಸಿದ್ದಾರೆ. ಇದೇ ವಿಚಾರವಾಗಿ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಹಂಸಲೇಖ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸುರೇಶ್ ಕುಮಾರ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಸ್ತೃತ ಬರವಣಿಗೆ ಮೂಲಕ ಹಂಸಲೇಖ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ಹಂಸಲೇಖ ಅವರ ಧರ್ಮಪತ್ನಿಗೆ ಅಭಿನಂದನೆ ತಿಳಿಸಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಏನಿದೆ?:
ಮನಸ್ಸಿನ ಕಹಿಯನ್ನೆಲ್ಲ ಕಕ್ಕಿದ ಮೇಲೆ "ಕೆಲವೊಂದು ಮಾತು ವೇದಿಕೆ ಗಲ್ಲ" ಎಂದು ಹೇಳುತ್ತಲೂ ಕ್ಷಮೆ ಕೇಳಬಹುದು ಎಂಬ ವಿಶೇಷ ಸಂಗತಿ ಇಂದು ಗೊತ್ತಾಯಿತು.
ಬೇಷರತ್ತಾಗಿ ಕ್ಷಮೆ ಕೇಳುವ ದೊಡ್ಡ ಗುಣವೂ ಇಲ್ಲವಲ್ಲ. ಎದುರಿಗಿನ ಜನ ಚಪ್ಪಾಳೆ ತಟ್ಟುತ್ತಾರೆ & ಶಿಳ್ಳೆ ಹಾಕುತ್ತಾರೆ ಎಂದು ಸಂದರ್ಭ ಪ್ರಜ್ಞೆ, ಸಭಾ ಪ್ರಜ್ಞೆ ಕಳೆದುಕೊಂಡು ಅನಗತ್ಯವಾಗಿ ಏನೆಲ್ಲಾ ಹೇಳಿಬಿಟ್ಟ ಮೇಲೆ "ಕ್ಷಮೆ, ಕ್ಷಮೆ" ಎಂದು ಕೇಳುವುದೂ ಸಂಗೀತ ನಿರ್ದೇಶಕರು ಹೊರಹೊಮ್ಮಿಸಿರುವ ಕೆಟ್ಟ ಅಪಸ್ವರ.
ಎದುರಿಗೆ ಚಪ್ಪಾಳೆ ತಟ್ಟುವ ಜನರಿಗಿಂತ, ತನ್ನ ಚುಚ್ಚು ಮಾತುಗಳಿಂದ ಘಾಸಿಯಾಗುವ ಅಪಾರ ಸಂಖ್ಯೆಯ ಜನರ ಭಾವನೆ ಇಷ್ಟು ವರ್ಷ ಸಾರ್ವಜನಿಕ ಜೀವನ ನೋಡಿರುವವರಿಗೆ ಅರ್ಥವಾಗಬೇಕಿತ್ತು. ಈಗ ಕ್ಷಮೆ ಕೇಳೋ ವಿಡಿಯೋದಲ್ಲೂ "ಕೆಲವೊಂದು ಮಾತುಗಳು ವೇದಿಕೆಗಲ್ಲ" ಅಂದಿದ್ದಾರೆ. ಅಂತಹ ಮಾತುಗಳು ವೇದಿಕೆಗಲ್ಲ, ಮನಸ್ಸಲ್ಲಿದ್ದರೂ ವಿಷ ಅನ್ನೋದು ಇಷ್ಟು ವಯಸ್ಸಿನ ಹಿರಿಯರಾದವರಿಗೆ, ಇಷ್ಟೊಂದು ಅನುಭವ ಇರುವವರಿಗೆ ಗೊತ್ತಿಲ್ಲವೆ?
ಇವರ ಅರ್ಥಹೀನ ಮಾತಿನಿಂದ ಪೇಜಾವರ ಶ್ರೀಗಳ ಶ್ರೇಷ್ಠ ವ್ಯಕ್ತಿತ್ವಕ್ಕೆ ಏನೂ ಕುಂದಾಗುವುದಿಲ್ಲ. ರಾಗ ತಪ್ಪಿದವರ, ವಿವೇಚನೆಯ ತಾಳ ಕಳೆದುಕೊಂಡವರ ತೂಕ ಕಡಿಮೆಯಾಯಿತು ಅಷ್ಟೇ! ಏನೇ ಆಗಲಿ. ಅವರಿಗೆ ತಿಳುವಳಿಕೆ ನೀಡಿರುವ ಅವರ ಧರ್ಮಪತ್ನಿಯವರಿಗೆ ನನ್ನ ಅಭಿನಂದನೆಗಳು.
PublicNext
16/11/2021 01:17 pm