ಬೆಂಗಳೂರು: ಕೃಷಿ ಸಚಿವ ಬಿ. ಸಿ ಪಾಟೀಲ್ ಅವರ ಹೇಳಿಕೆಯೊಂದು ರಾಜ್ಯದಲ್ಲಿ ವಿವಾದ ಸೃಷ್ಟಿಸಿದೆ. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಹೊಸ ವಿವಾದವನ್ನು ಮೈಮೇಲೆ ಕೆಡವಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದರು. ಸಮಸ್ಯೆಗಳಲ್ಲಿ ಸಿಲುಕಿರುವ ರೈತರು ಶ್ರಮವಹಿಸಿ ಸಮಸ್ಯೆಗಳ ಸುಳಿಯಿಂದ ಹೊರಬರುವಂತಾಗಬೇಕು. ಅದು ಬಿಟ್ಟು ಹೇಡಿಗಳಂತೆ ಸಾವಿಗೆ ಶರಣಾಗಬಾರದು. ಹೆಂಡತಿ, ಮಕ್ಕಳನ್ನು ನೋಡಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವಾತ ಹೇಡಿ ಎಂದಿದ್ದಾರೆ. ಭೂಮಿಯನ್ನು ನಂಬಿಕೊಂಡು ಜೀವನದಲ್ಲಿ ಮುಂದೆ ಬಂದ ಅನೇಕರು ನಮ್ಮ ಮುಂದಿದ್ದಾರೆ. ಹೀಗಿರುವಾಗ ಸಮಸ್ಯೆ ಇದೆ ಎಂದು ಸಾವಿಗೆ ಶರಣಾಗುವುದು ಎಷ್ಟು ಸರಿ ಎಂದ ಸಚಿವ ಬಿಸಿ ಪಾಟೀಲ್ ಇದೇ ವೇಳೆ ಪ್ರಶ್ನಿಸಿದ್ದಾರೆ.
ಕೌರವನ ಈ ಹೇಳಿಕೆಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ತೀವ್ರ ಕಿಡಿ ಕಾರಿದ್ದಾರೆ. ಕೃಷಿ ಸಚಿವರೇ ರೈತರ ವಿರುದ್ಧ ನಾಲಗೆ ಹರಿಬಿಡುವುದು ಖಂಡನೀಯ ಎಂದು ಹೇಳಿರುವ ಅವರು, ಕೃಷಿ ಸಚಿವರಾಗಿದ್ದುಕೊಂಡು ರೈತರ ಕುರಿತು ಬೇಜವಾಬ್ದಾರಿತನ ಪ್ರದರ್ಶಿಸಬಾರದು. ರೈತ ಹುಟ್ಟಿನಿಂದಲೇ ಸ್ವಾಭಿಮಾನಿ ಹಾಗೂ ಮರ್ಯಾದಸ್ತ. ಸಾಲ ಕೊಟ್ಟವರು ಬಂದು ಕಿಬ್ಬದಿಯ ಕೀಲು ಮುರಿದಂತೆ ಪೀಡಿಸುವಾಗ ಮರ್ಯಾದೆಗೆ ಅಂಜಿ ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಕೃಷಿ ಸಚಿವರು ಹೇಳಿದಂತೆ ರೈತ ಹೇಡಿಯಲ್ಲ ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಇನ್ನು ಸಚಿವ ಬಿ. ಸಿ ಪಾಟೀಲ್ ಹೇಳಿಕೆ ಬಗ್ಗೆ ಸ್ವತಃ ಅವರ ಪಕ್ಷದಲ್ಲೇ ಅಪಸ್ವರ ಎದ್ದಿದೆ. ಬಿಜೆಪಿಯ ಹಲವು ನಾಯಕರು ಈ ಹೇಳಿಕೆ ಬಗ್ಗೆ ಅಸಮಾಧಾನ ಹೊಂದಿದ್ದಾರೆ.
PublicNext
04/12/2020 09:23 am