ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯ ಮೌಲ್ಯವು ಕಳೆದ ವರ್ಷಕ್ಕೆ ಹೋಲಿಸಿದರೆ 36 ಲಕ್ಷ ರೂ. ಹೆಚ್ಚಳವಾಗಿದೆ.
ಪ್ರಧಾನಿ ಮೋದಿ ಅವರ ವಾರ್ಷಿಕ ಆಸ್ತಿ ವಿವರವನ್ನು ಪ್ರತಿ ವರ್ಷದಂತೆ ಪ್ರಧಾನಿ ಕಾರ್ಯಾಲಯ ಸ್ವಯಂ ಪ್ರೇರಣೆಯಿಂದ ಪ್ರಕಟಿಸಿದ್ದು, ಇದರಲ್ಲಿ 2020ರ ಜೂನ್ 30ರ ವರೆಗಿನ ಮಾಹಿತಿಯನ್ನು ನೀಡಲಾಗಿದೆ. ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿರುವುದು ಮತ್ತು ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಿಕ್ಕಿರುವ ಕಾರಣ ಆಸ್ತಿಯ ಮೌಲ್ಯ ಏರಿಕೆಯಾಗಿದೆ.
ಮೋದಿ ಆಸ್ತಿ:
ನಗದು/ಬ್ಯಾಂಕ್ ಖಾತೆಗಳ ಮಾಹಿತಿ: 2020ರ ಜೂನ್ 30ರ ವೇಳೆಗೆ ಪ್ರಧಾನಿ ಮೋದಿಯವರ ಬಳಿ 31,450 ರೂ. ಇತ್ತು. ಉಳಿದಂತೆ ಎಸ್‌ಬಿಐ ಗಾಂಧಿನಗರ ಬ್ರಾಂಚ್‌ನಲ್ಲಿರುವ ಉಳಿತಾಯ ಖಾತೆಯಲ್ಲಿ 3,38,173 ರೂ. ಹಣ ಇದೆ. ಕಳೆದ ವರ್ಷ ಇದು 4,143 ರೂ. ಇತ್ತು. ಈ ಬ್ಯಾಂಕಿನಲ್ಲಿ ಎಫ್‌ಡಿಆರ್ ಮತ್ತು ಎಂಒಡಿ ಬ್ಯಾಲೆನ್ಸ್ 1,60,28,039 ರೂ. ಇದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು 1,27,81,574 ರೂ. ಇತ್ತು. 2019 ರ ಲೋಕಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ ಅವರು ಇದನ್ನು ಘೋಷಿಸಿದ್ದರು.
ಪ್ರಧಾನಿ ಮೋದಿ 2012ರಲ್ಲಿ ಎಲ್ ಅಂಡ್ ಟಿ ಇನ್‍ಫ್ರಾಸ್ಟ್ರಕ್ಚರ್ ನಲ್ಲಿ 20,000 ರೂ. ಹೂಡಿಕೆ ಮಾಡಿದ್ದಾರೆ. ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಅಡಿ 5,18,235 ರೂ. ಹೂಡಿಕೆ ಮಾಡಿದ್ದಾರೆ. ಇದರ ಜೊತೆಗೆ 1,59,281 ರೂ. ಮೌಲ್ಯದ ಎಲ್‍ಐಸಿ ಪ್ರೀಮಿಯಂ ಕಟ್ಟಿದ್ದಾರೆ.
ಚಿನ್ನ/ ಭೂಮಿ: ಮೋದಿಯವರು ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಈ ಉಂಗುರಗಳು 45 ಗ್ರಾಂ ತೂಕವನ್ನು ಹೊಂದಿದ್ದು ಇವುಗಳ ಮೌಲ್ಯ 1,51,875 ರೂ. ಆಗಿದೆ. ಗಾಂಧಿನಗರಲ್ಲಿ ಮೋದಿ ಅವರು 2002ರ ಅಕ್ಟೋಬರ್ 25 ರಂದು ನಾಲ್ಕನೇ ಒಂದರಷ್ಟು ಷೇರು (1,30,488 ರೂ.) ನೀಡಿ, ವಸತಿ ಕಟ್ಟಡವೊಂದನ್ನು ಖರೀದಿಸಿದ್ದರು. ಈ ಭೂಮಿಯ ಮೇಲೆ 2,47,208 ರೂ.ಗಳ ಹೂಡಿಕೆಯನ್ನು ಮಾಡಲಾಗಿದೆ. ಸದ್ಯ ಈ ಜಾಗದ ಮಾರುಕಟ್ಟೆ ಬೆಲೆ 1,10,00,000 ರೂ. ಎಂದು ಅಂದಾಜಿಸಲಾಗಿದೆ.
PublicNext
15/10/2020 05:50 pm