ಜೀವನದಲ್ಲಿ ಜಿಗುಪ್ಸೆಗೊಂಡು ಮಗಳ ಸಮೇತ ಕಾಲುವೆಯ ನೀರಲ್ಲಿ ಮುಳುಗಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆ ಹಾಗೂ ಮಗಳ ಪ್ರಾಣವನ್ನ ಇಆರ್ ಎಸ್ ಎಸ್ 112 ಪೊಲೀಸ್ ಸಿಬ್ಬಂದಿ ತಮ್ಮ ಸಮಯಪ್ರಜ್ಞೆಯಿಂದ ಉಳಿಸಿದ್ದಾರೆ..
ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಹಾರೋಗೇರಿ ಗ್ರಾಮದ 38 ವರ್ಷದ ಮಹಿಳೆ ತನ್ನ ಹದಿನಾಲ್ಕು ವರ್ಷದ ಮಗಳನ್ನು ಕರೆದುಕೊಂಡು ಗ್ರಾಮದ ಸಮೀಪದಲ್ಲಿಯೇ ಇರುವ ದೊಡ್ಡ ಕಾಲುವೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಳು. ಮಗಳನ್ನು ನೀರಲ್ಲಿ ಮುಳುಗಿಸುತ್ತಿದ್ದಂತೆಯೇ ಕಣ್ಣಾರೆ ಕಂಡ ಗ್ರಾಮಸ್ಥರು ERSS 112 ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ದೊರಕುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ 112 ಸಿಬ್ಬಂದಿ ಮಗಳನ್ನು ಹಾಗೂ ತಾಯಿಯನ್ನು ರಕ್ಷಿಸಿದ್ದಾರೆ. ನೀರಲ್ಲಿ ಮುಳುಗಿದ್ದ ಹದಿನಾಲ್ಕು ವರ್ಷದ ಮಗಳು ನೀರು ಸೇವಿಸಿದ್ರಿಂದ ತೀವ್ರ ಅಸ್ವಸ್ಥಗೊಂಡಿದ್ದಳು. ತಕ್ಷಣ ಇಬ್ಬರನ್ನೂ ತಮ್ಮ ವಾಹನದಲ್ಲಿ ಗದಗ ಜಿಮ್ಸ್ ಆಸ್ಪತ್ರೆಗೆ ಕರೆ ತಂದು ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಅಂತಾ ವೈದ್ಯರು ಹೇಳಿದ್ದಾರೆ.
ಇನ್ನು ಸಕಾಲಕ್ಕೆ ಬಂದು ಇಬ್ಬರ ಪ್ರಾಣ ಉಳಿಸಿದ ERSS 112 ಸಿಬ್ಬಂದಿ ಮುಂಡರಗಿ ಠಾಣೆಯ ಹೆಡ್ ಕಾನ್ ಸ್ಟೇಬಲ್ ಖಾಸೀಮಸಾಬ್ ಡಿ ಹರಿವಾಣ, ಪೇದೆ ಎಸ್ ಎಮ್ ಸುಂಕದ ಹಾಗೂ ಚಾಲಕ ದಾವಲಸಾಬ್. ಎ ಕಲೆಗಾರ ಅವರ ಸಮಯ ಪ್ರಜ್ಞೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸುರೇಶ್ ಲಮಾಣಿ, ಪಬ್ಲಿಕ್ ನೆಕ್ಸ್ಟ್, ಗದಗ
PublicNext
29/07/2022 01:04 pm