ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡಾಂಬೆಯ ಕಲ್ಪನೆ ಕೊಟ್ಟ ದೊಡ್ಡಮೇಟಿ ಸಮಾಧಿ ಅನಾಥ

ಅವರು ಕರ್ನಾಟಕಕ್ಕೆ ಕನ್ನಡಾಂಬೆ ಭುವನೇಶ್ವರಿಯ ಕಲ್ಪನೆ ಕೊಟ್ಟ ಕನ್ನಡ ಕುವರ, ಕರ್ನಾಟಕ ಏಕೀಕರಣ ಚಳುವಳಿಯ ಹರಿಕಾರ, ಬ್ರಿಟೀಷ್ ಬಟ್ಟೆಗಳನ್ನು ಸುಟ್ಟು ಖಾದಿ ಬಟ್ಟೆಗಳನ್ನು ಪ್ರಚುರಪಡಿಸಿದ ಛಲಗಾರ, ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಕನ್ನಡ ನೆಲದ ಏಕೀಕರಣಕ್ಕಾಗಿ ದುಡಿದ ಹೋರಾಟಗಾರ, ಮುಂಬೈ ಅಧಿವೇಶನದಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲೇ ಮಾತನಾಡಿದ ಕನ್ನಡ ನೆಲದ ಸರದಾರ.

ಹೌದು. ನಾವು ಹೇಳುತ್ತಿರುವುದು ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಪರತೆಯ ಜೀವಸತ್ವವನ್ನು ಎತ್ತಿ ಹಿಡಿದ ಹೋರಾಟಗಾರ ದಿವಂಗತ ಅಂದಾನಪ್ಪ ದೊಡ್ಡಮೇಟಿ ಅವರ ಬಗ್ಗೆ. ಆದರೆ ವಿಷಾದದ ವಿಚಾರವೆಂದರೆ ಏಕೀಕಕರಣ ಚಳುವಳಿ ಸಂದರ್ಭದಲ್ಲಿ ದಿಟ್ಟತನದ ಪ್ರೌಢಿಮೆ ತೋರಿದ್ದ ಅಂದಾನಪ್ಪ ದೊಡ್ಡಮೇಟಿ ಅವರ ಸಮಾಧಿ ಈಗ ಅನಾಥವಾಗಿದೆ.

ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದವರಾದ ಅಂದಾನಪ್ಪ ದೊಡ್ಡಮೇಟಿ ಅವರು ಸ್ವಂತ ಖರ್ಚು ಮಾಡಿ ಹೋರಾಟದಲ್ಲಿ ಪಾಲ್ಗೊಂಡ ಕನ್ನಡದ ಕಟ್ಟಾಳು. ಮಾರ್ಚ್ 16, 1908ರಲ್ಲಿ ಜಕ್ಕಲಿ ಗ್ರಾಮದ ಜ್ಞಾನದೇವ ದೊಡ್ಡಮೇಟಿ ಅವರ ಪುತ್ರರಾಗಿ ಜನಿಸಿದ ಅಂದಾನಪ್ಪ ಬಾಲ್ಯದಿಂದಲೂ ಹೋರಾಟದ ಕಿಚ್ಚು ಬೆಳೆಸಿಕೊಂಡವರು. ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿದ್ದ ಇವರು 1934ರ ಮಾರ್ಚ್ 3ರಂದು ಸ್ವತಃ ಗಾಂಧೀಜಿಯವರನ್ನು ಜಕ್ಕಲಿ ಗ್ರಾಮಕ್ಕೆ ಕರೆಸಿದ್ದರು. ಆ ಮೂಲಕ ಅಂದಿನಿಂದಲೇ ಗ್ರಾಮದಲ್ಲಿ ಅಸ್ಪಶ್ಯತೆ ನಿವಾರಣೆ ಹಾಗೂ ಸ್ವದೇಶಿ ಉತ್ಪನ್ನಗಳ ಬಳಕೆಗೆ ಶಪಥ ಮಾಡಲಾಗಿತ್ತು. ಕರ್ನಾಟಕ ಸಿಂಹ ಎಂದೇ ಖ್ಯಾತನಾಮರಾಗಿದ್ದ ಬೆಳಗಾವಿಯ ಗಂಗಾಧರ್ ರಾವ್ ದೇಶಪಾಂಡೆ, ಹರ್ಡೇಕರ್ ಮಂಜಪ್ಪ, ವಿ.ವಿ ಪಾಟೀಲ್ ಅವರು ಕೂಡ ಆ ವೇಳೆ ಗಾಂಧೀಜಿಯವರೊಂದಿಗೆ ಗ್ರಾಮಕ್ಕೆ ಬಂದಿದ್ದರು. ತಮ್ಮ 22ನೇ ವಯಸ್ಸಿನಲ್ಲಿ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಅಂದಾನಪ್ಪ ದೊಡ್ಡಮೇಟಿ ಮುಂದೆ 1933ರಲ್ಲಿ ಕಾನೂನು ಭಂಗ ಹೋರಾಟದಲ್ಲಿ ಭಾಗಿಯಾಗಿ ಜೈಲು ಕಂಡಿದ್ದರು. ಈ ಎಲ್ಲ ಕಾರಣಗಳಿಂದ ಜಕ್ಕಲಿ ಗ್ರಾಮವನ್ನು ಈಗಲೂ ಗಾಂಧಿಗ್ರಾಮ ಎನ್ನಲಾಗುತ್ತದೆ.

ಹಲವು ಬಾರಿ ಸೆರೆಮನೆವಾಸ ಅನುಭವಿಸಿದ್ದ ದೊಡ್ಡಮೇಟಿ- ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಅನೇಕ ಬಾರಿ ಜೈಲುವಾಸ ಶಿಕ್ಷೆ ಅನುಭವಿಸಿದ್ದ ಅಂದಾನಪ್ಪ ಅವರು ಆಗಿನ ಅಖಂಡ ಧಾರವಾಡ ಜಿಲ್ಲಾ ಹರಿಜನ ಸೇವಾ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 1930ರಲ್ಲಿ ಜಕ್ಕಲಿ ಗ್ರಾಮದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿ ಇಟ್ಟು ಎಲ್ಲರೂ ಸ್ವದೇಶಿ ಖಾದಿ ಬಟ್ಟೆಗಳನ್ನೇ ತೊಡಬೇಕೆಂದು ಪ್ರತಿಪಾದಿಸಿದ್ದರು. ಇದು ಬ್ರಿಟೀಷ್ ಅಧಿಕಾರಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.

ಸ್ವಾತಂತ್ರ್ಯ ಸಿಕ್ಕ ನಂತರ ಕನ್ನಡ ನೆಲದ ಏಕೀಕರಣಕ್ಕಾಗಿಯೂ ಅಂದಾನಪ್ಪ ದೊಡ್ಡಮೇಟಿ ಅವಿರತವಾಗಿ ಚಳುವಳಿ ಕಟ್ಟಿ ಬೆಳೆಸಿದ್ದಾರೆ. ಜಾಲಿಹಾಳ ಅನಂತರಾಯರು, ಸೂಡಿ ಗ್ರಾಮದ ವಿರುಪಾಕ್ಷಪ್ಪ ಅಬ್ಬಿಗೇರಿ ಕೂಡ ಇವರೊಂದಿಗೆ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಏಕೀಕರಣದ ಚಳುವಳಿಯ ಭಾಗವಾಗಿ ಗದುಗಿನಿಂದ ಕೆಲಕಾಲ 'ಕಲ್ಕಿ' ಎಂಬ ಪತ್ರಿಕೆಯನ್ನೂ ನಡೆಸಿದ್ದರು. ಸಾಹಿತ್ಯದ ಮೇಲೂ ಒಲವು ಹೊಂದಿದ್ದ ದೊಡ್ಡಮೇಟಿ ಅವರು ಕರ್ನಾಟಕ ಮಹಿಮಾಸ್ತೋತ್ರ ಎಂಬ ಕಾವ್ಯ ಸಂಕಲವನ್ನೂ ಪ್ರಕಟಿಸಿದ್ದರು. ಮುಂಬೈ ಪ್ರಾಂತ್ಯದ ಸರ್ಕಾರದಲ್ಲಿ ಶಾಸಕರಾಗಿದ್ದ ಅಂದಾನಪ್ಪ ದೊಡ್ಡಮೇಟಿ ಅಲ್ಲಿ ಶಾಸನ ಸಭೆಯಲ್ಲಿ ಕನ್ನಡ ನೆಲದ ಒಂದುಗೂಡಿಸುವಿಕೆ ಬಗ್ಗೆ ಪ್ರಸ್ತಾಪಿಸಿದ್ದರು. ಏಕೀಕರಣ ಚಳುವಳಿಗೆ ಧುಮುಕಲು ತಮಗಿದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಪ್ಪಟ ಕನ್ನಡಿಗ ಅಂದಾನಪ್ಪ ದೊಡ್ಡಮೇಟಿ. ರಾ.ಹ ದೇಶಪಾಂಡೆ, ಆಲೂರು ವೆಂಕಟರಾಯರೊಂದಿಗೂ ಚಳುವಳಿಗೆ ಸಾಥ್ ಕೊಟ್ಟಿದ್ದರು.

ಕನ್ನಡಾಂಬೆಯ ಪರಿಕಲ್ಪನೆ ನೀಡಿದ್ದ ದೊಡ್ಡಮೇಟಿ-ಕನ್ನಡದ ಕಟ್ಟಾಳು ಅಂದಾನಪ್ಪ ದೊಡ್ಡಮೇಟಿ ಅವರ ಕರ್ನಾಟಕ ಮಹಿಮಾ ಸ್ತೋತ್ರ ಕಾವ್ಯದಲ್ಲಿ ಕನ್ನಡಾಂಬೆಯ ಪರಿಕಲ್ಪನೆ ಇದೆ. ಇದನ್ನು ಓದಿ ಸ್ಫೂರ್ತಿಗೊಂಡ ಚಿತ್ರಕಲಾ ಶಿಕ್ಷಕ ಸಿ.ಎನ್ ಪಾಟೀಲ್ ಅವರು 1953 ಜನವರಿ 11ರಂದು ಅನ್ನದಾನೀಶ್ವರ ಮಠದಲ್ಲಿ ಕನ್ನಡಾಂಬೆ ಭುವನೇಶ್ವರಿಯ ಮೊಟ್ಟ ಮೊದಲ ತೈಲ ವರ್ಣ ಚಿತ್ರ ರಚಿಸಿದರು. ಅದೇ ಕಲಾಕೃತಿ ಇವತ್ತಿಗೂ ಜಕ್ಕಲಿ ಗ್ರಾಮದಲ್ಲಿನ ಅಂದಾನಪ್ಪ ದೊಡ್ಡಮೇಟಿ ಅವರ ಮನೆಯಲ್ಲಿದೆ. ಪ್ರತಿನಿತ್ಯವೂ ಆ ಮನೆಯಲ್ಲಿ ಕನ್ನಡಾಂಬೆಯ ತೈಲವರ್ಣ ಚಿತ್ರಕ್ಕೆ ಪೂಜೆ ನಡೆಯುತ್ತದೆ. ಮತ್ತು ಪ್ರತಿನಿತ್ಯವೂ ಅಲ್ಲಿ ಕನ್ನಡದ ದೀಪ ಬೆಳಗುತ್ತದೆ.

ಕನ್ನಡಕ್ಕಾಗಿ, ಕನ್ನಡ ನೆಲಕ್ಕಾಗಿ ಇಷ್ಟೆಲ್ಲ ಕೈಂಕರ್ಯ, ನಿಸ್ವಾರ್ಥ ಸೇವೆಗಳನ್ನು ಮಾಡಿದ ಅಂದಾನಪ್ಪ ದೊಡ್ಡಮೇಟಿ ಅವರು 1972ರ ಫೆಬ್ರುವರಿ 21 ರಂದು ನಿಧನರಾಗಿದ್ದಾರೆ. ಆದರೆ ಇಂತಹ ಧೀಮಂತ ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕದ ಏಕೀಕರಣ ಹರಿಕಾರರ ಸಮಾಧಿ ಇಂದು ಅನಾಥವಾಗಿದೆ. ಒಬ್ಬ ಹೋರಾಟಗಾರನಾಗಿ, ಆದರ್ಶಪರತೆಯ ರಾಜಕಾರಣಿಯಾಗಿ ಸೇವೆಗೈದ ಅಂದಾನಪ್ಪ ದೊಡ್ಡಮೇಟಿ ಹಾಗೂ ಅದರ ಪಕ್ಕದಲ್ಲೇ ಇರುವ ಪುತ್ರ ದಿವಂಗತ ಜ್ಞಾನದೇವ ದೊಡ್ಡಮೇಟಿ ಅವರ ಸಮಾಧಿ ಸ್ಥಳವನ್ನು ಸ್ಮಾರಕವನ್ನಾಗಿ ಅಭಿವೃದ್ಧಿ ಮಾಡಬೇಕೆಂಬುದು ಗ್ರಾಮಸ್ಥರ ನಾಲ್ಕು ದಶಕಗಳ ಒತ್ತಾಸೆಯಾಗಿದೆ. ಆದರೆ ಇದುವರೆಗೆ ಬಂದು ಹೋದ ಯಾವ ಸರ್ಕಾರಗಳೂ ಈ ಕೆಲಸ ಮಾಡದಿರುವುದು ನೋವಿನ ಸಂಗತಿಯಾಗಿದೆ.

-ನಾಗರಾಜ ತಳುಗೇರಿ

Edited By : Vijay Kumar
PublicNext

PublicNext

12/11/2020 08:40 pm

Cinque Terre

107.26 K

Cinque Terre

5