ದಾವಣಗೆರೆ: ಅದು ಸಮಯ ಮೂರು ಗಂಟೆ. ಇದ್ದಕ್ಕಿದ್ದಂತೆ ಮದವೇರಿದ ಗೂಳಿ ಬರುತ್ತಿದ್ದಂತೆ ಜನರೆಲ್ಲಾ ಬೆಚ್ಚಿ ಬಿದ್ದಿದ್ದಾರೆ. ಇನ್ನು ರಸ್ತೆಯಲ್ಲಿ ಬುಲ್ ಓಡಾಡುತ್ತಿದ್ದಂತೆ ಜನರು ಮನೆ ಬಾಗಿಲು ಹಾಕಿಕೊಂಡು ಒಳ ಹೋಗಿದ್ದಾರೆ. ಮಾತ್ರವಲ್ಲ ಎರಡು ಗಂಟೆಗಳ ಕಾಲ ಜನರ ನೆಮ್ಮದಿ ಹಾಳು ಮಾಡಿದೆ.
ದಾವಣಗೆರೆಯ ಗಾಂಧಿನಗರಕ್ಕೆ ಇದ್ದಕ್ಕಿದ್ದಂತೆ ಗೂಳಿ ಬಂದಿದೆ. ಮದ ಏರಿದ ಕಾರಣ ಅತ್ತಿಂದಿತ್ತ ಓಡಾಡಿದೆ. ಕಂಡ ಕಂಡವರ ಮೇಲೆ ಹಾಯಲು ಹೋಗಿದೆ. ಈ ವೇಳೆ ಜನರು ಆತಂಕಕ್ಕೆ ಒಳಗಾಗಿದ್ರು. ಕೆಲವರು ಗೇಟ್ ಒಳಗೆ ಸೇರಿಕೊಂಡರೆ, ಮತ್ತೆ ಕೆಲವರು ಮನೆಯ ಬಾಗಿಲು ತೆರೆಯದೇ ಕಿಟಕಿಯಲ್ಲಿ ನಿಂತು ಗೂಳಿ ಅಬ್ಬರ ವೀಕ್ಷಿಸಿದರು.
ಗಾಂಧಿನಗರ, ಆಜಾದ್ ನಗರ, ಅಹ್ಮದ್ ನಗರ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಮದವೇರಿ ಗುದ್ದಲು ಓಡಾಡಿದೆ. ಅದೃಷ್ಟವಶಾತ್ ಯಾರಿಗೂ ಗುದ್ದಿ ಗಾಯಗೊಂಡಿಲ್ಲ. ಆದ್ರೆ ಗೂಳಿಯ ಆರ್ಭಟಕ್ಕೆ ಜನರು ಗಲಿಬಿಲಿ ಆದರು. ಕೆಲವರು ಭಯಪಟ್ಟರೆ ಮತ್ತೆ ಕೆಲವರು ಚೀರಾಟ, ಕೂಗಾಟ ನಡೆಸಿದರು.
ಗೂಳಿಯ ಆರ್ಭಟ ಜೋರಾಗುತ್ತಿದ್ದಂತೆ ಗಾಂಧಿನಗರ ಪೊಲೀಸರಿಗೆ ಸ್ಥಳೀಯರು ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಕೂಡಲೇ ಆಗಮಿಸಿದ ಪೊಲೀಸರು ಚಾಣಾಕ್ಷತನದಿಂದ ಹಗ್ಗದ ಮೂಲಕ ಬುಲ್ ಹಿಡಿದು ಜನರ ಆತಂಕ ದೂರ ಮಾಡಿದರು.
PublicNext
20/08/2021 07:49 pm