ಹಾವೇರಿ: ನೋಟದಲ್ಲಿಯೇ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಾ, ಸಹಸ್ರಾರು ಜನರ ನಡುವೆ ಮಿಂಚಿನ ವೇಗದಲ್ಲಿ ಮುನ್ನುಗ್ಗುತ್ತಾ, ಕೊರಳಿಗೆ ಕಟ್ಟಿದ ಕೊಬ್ಬರಿ ಹರಿಯಲು ಒಮ್ಮೆಯೂ ಅವಕಾಶ ಕೊಡದೆ ಗುರಿ ಮುಟ್ಟುತ್ತಿದ್ದ ಹಾವೇರಿ ಡಾನ್ 111 ಎಂಬ ಕೊಬ್ಬರಿ ಹೋರಿ ತನ್ನ ಅಂತಿಮ ಆಟ ಮುಗಿಸಿದೆ.
ಹೌದು.. ಕೊಬ್ಬರಿ ಹೋರಿ ಸ್ಪರ್ಧೆಯ ಅಂಗಳಕ್ಕೆ ಹಾವೇರಿ ಡಾನ್ ಕಾಲಿಟ್ಟರೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ಮಿಂಚಿನ ಓಟ ಆರಂಭಿಸಿದರೆ ಅಭಿಮಾನಿಗಳು ಹೈಸ್ಪೀಡ್, ಶರವೇಗದ ಸರದಾರ’ ಎಂದು ಕೂಗುತ್ತಾ ಚಪ್ಪಾಳೆ,ಶಿಳ್ಳೆ ಹಾಕಿ ಪ್ರೋತ್ಸಾಹ ನೀಡುತ್ತಿದ್ದರು. ಹಾವೇರಿ ಜಿಲ್ಲೆಯ ಹಾನಗಲ್, ಕನವಳ್ಳಿ, ದೇವಿಹೊಸೂರು, ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ, ತೋಗರ್ಸಿ ಸೇರಿದಂತೆ ಸುತ್ತಮತ್ತಲ ಜಿಲ್ಲೆಗಳಲ್ಲಿ ನಡೆಯುವ ಕೊಬ್ಬರಿ ಹೋರಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿತ್ತು. 25 ಬೈಕ್, 30 ತೊಲೆ ಬಂಗಾರ, 2 ಚಕ್ಕಡಿ, ಗೋದ್ರೇಜ್ ಫ್ರಿಡ್ಜ್ ಸೇರಿದಂತೆ ಹಲವು ಬಹುಮಾನಗಳನ್ನು ಗೆದ್ದುಕೊಂಡಿದ್ದ ಈ ಕೊಬ್ಬರಿ ಹೋರಿಗೆ ಸೋಲಿಲ್ಲದ ಸರದಾರ ಎಂಬ ಬಿರುದು ಸಿಕ್ಕಿತ್ತು ಆದರೆ ಡಾನ್ ತನ್ನ ಗರ್ಜನೆಯನ್ನು ಮುಗಿಸಿ ಕೊನೆ ಉಸಿರು ಏಳೆದಿದ್ದಾನೆ.
ಹಾವೇರಿಯ ನಟರಾಜ ಕುಳೇನೂರು, ಗಿರೀಶ ಹೊಂಬರಡಿ, ಸಂತೋಷ ಸ್ವಾದಿ ಮತ್ತು ರಾಜು ಮಣೇಗಾರ ಎಂಬ ನಾಲ್ವರು ಸ್ನೇಹಿತರು ಈ ಹೋರಿಯ ಮಾಲೀಕರು. 2006ರಲ್ಲಿ ತಮಿಳುನಾಡಿನಿಂದ 50 ಸಾವಿರಕ್ಕೆ ನಾಲ್ಕು ವರ್ಷದ ಹೋರಿಯನ್ನು ಖರೀದಿಸಿ ತಂದಿದ್ದರು. 9 ವರ್ಷ ಪ್ರೀತಿಯಿಂದ ಸಾಕಿದ್ದ ಈ ಹೋರಿ ಮನೆಯ ಸದಸ್ಯರಲ್ಲಿ ಒಬ್ಬನಾಗಿತ್ತು. ನಿತ್ಯ ತಾಲೀಮು, ಹುರುಳಿ ನುಚ್ಚು, ಬಿಳಿ ಜೋಳದ ನುಚ್ಚು, ಹತ್ತಿ ಕಾಳು, ಬೆಣ್ಣೆ, ಜವಾರಿ ಕೋಳಿ ಮೊಟ್ಟೆ, ಹಸಿ ಹುಲ್ಲು, ಜೋಳದ ಸೊಪ್ಪೆ ಮುಂತಾದ ಆಹಾರವನ್ನು ನಿಯಮಿತವಾಗಿ ಕೊಡುತ್ತಿದ್ದರು. ನಿತ್ಯ ಎರಡೂವರೆ ಗಂಟೆ ಈಜು ಮತ್ತು ಓಟದ ತಾಲೀಮು ಮಾಡಿಸುತ್ತಿದ್ದರು. ನಾವು ರೊಕ್ಕ ಮಾಡೋಕೆ ಇದನ್ನು ತಮಿಳುನಾಡಿನಿಂದ ತಂದಿರಲಿಲ್ಲ. ಬಸವಣ್ಣನ ಮೇಲಿನ ಪ್ರೀತಿಯಿಂದ ಕರೆ ತಂದಿದ್ದೆವು’ ಎಂದು ಹೋರಿ ಮಾಲೀಕರಲ್ಲಿ ಒಬ್ಬರಾದ ನಟರಾಜ ಕುಳೇನೂರ ತಿಳಿಸಿದರು.
ಅನಾರೋಗ್ಯದಿಂದ ಮೃತಪಟ್ಟ ಹೋರಿಯನ್ನು ಹಾವೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಜಿಲ್ಲೆಯ ನೂರಾರು ಅಭಿಮಾನಿಗಳು ಹೋರಿಯ ಅಂತಿಮ ದರ್ಶನ ಪಡೆದರು. ಹಾನಗಲ್ ತಾಲ್ಲೂಕಿನ ಗುಡ್ಡದ ಮತ್ತಿಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
PublicNext
12/01/2022 10:42 pm