ದಾವಣಗೆರೆ: ಚನ್ನಗಿರಿ ತಾಲೂಕಿನ ಕೆಲವೆಡೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಭದ್ರಾ ಚಾನೆಲ್ ಸೇತುವೆ ಕುಸಿದು ಬಿದ್ದ ಘಟನೆ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಗ್ರಾಮದ ಬಳಿ ನಡೆದಿದೆ.
ಕಣಿವೆಬಿಳಚಿ ಗ್ರಾಮ ಸೇರಿದಂತೆ ಕೆಲವೆಡೆ ಅಬ್ಬರದ ಮಳೆಯಾಗಿದೆ. ಹಳೆಯದಾಗಿದ್ದ ಕಣಿವೆಬಿಳಚಿ ಗ್ರಾಮದ ಭದ್ರಾ ಚಾನೆಲ್ ಸೇತುವೆ ಮಳೆಯ ರಭಸಕ್ಕೆ ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದಿನನಿತ್ಯ ಗ್ರಾಮದಿಂದ ಶಾಲಾ ಮಕ್ಕಳು ಸೇರಿದಂತೆ ನೂರಾರು ಜನರು ಸೇತುವೆ ಮೇಲೆಯೇ ಹೋಗುತ್ತಿದ್ದರು. ಇಂದು ಸೇತುವೆ ಕುಸಿದು ಬಿದ್ದಿದ್ದರಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆದಷ್ಟು ಬೇಗ ಹೊಸ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತಾತ್ಕಾಲಿಕವಾಗಿ ಓಡಾಡಲು ರಸ್ತೆ ನಿರ್ಮಾಣ ಮಾಡಿಕೊಡಬೇಕು. ಇಲ್ಲದಿದ್ದರೆ ಹತ್ತಾರು ಕಿ.ಮೀ ಸುತ್ತಿ ಬರಬೇಕಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
PublicNext
05/05/2022 01:45 pm