ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹಿರಿತನದಲ್ಲಿ ಶುಕ್ರವಾರ ರಾತ್ರಿ ಲಕ್ಷ ದೀಪೋತ್ಸವ ನಡೆಯಿತು.
ಈ ಬಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ 108 ದಿವ್ಯ ಸಾಗರ ಮುನಿ ಮಹಾರಾಜ್, ಜ್ಞಾನ ಹಾಗೂ ಸತ್ಯದ ಬೆಳಕು ನಮ್ಮೊಳಗೆ ಮೊದಲು ಬೆಳಗಬೇಕು. ಸತ್ಯ ಮತ್ತು ಜ್ಞಾನದ ಮೂಲಕ ಸಮ್ಯಕ್ ಜ್ಞಾನಪ್ರಾಪ್ತಿಮಾಡಿಕೊಂಡು ಭಗವಂತನನ್ನು ನಮ್ಮೊಳಗೆ ಕಂಡುಕೊಳ್ಳಬಹುದಾಗಿದೆ. ಲಕ್ಷ ದೀಪೋತ್ಸವ ಇದಕ್ಕೊಂದು ಉತ್ತಮ ರೂಪಕ ಎಂದರು.
ಭಟ್ಟಾರಕ ಸ್ವಾಮೀಜಿ ಸಂದೇಶ ನೀಡಿ, ಕೊರೊನಾ ನಿಯಂತ್ರಣಕ್ಕೆ ವಿಜ್ಞಾನಿಗಳು ಸಸ್ಯಾಹಾರಿ ಲಸಿಕೆ ತಯಾರಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್, ರಾಜ್ಯಮಟ್ಟದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಎಂಸಿಎಸ್ ಬ್ಯಾಂಕ್‍ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಪಿಎಚ್‍ಡಿ ಪದವಿ ಗಳಿಸಿರುವ ಶ್ರೀ ಧವಳಾ ಕಾಲೇಜಿನ ಡಾ.ಪದ್ಮಜಾ ಧೀರಜ್ ಅವರನ್ನು ಸನ್ಮಾನಿಸಲಾಯಿತು.
ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ ಕುಮಾರ್, ಎ. ದಿನೇಶ ಕುಮಾರ್ ಬೆಟ್ಕೇರಿ, ಜೈನ್‍ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್, ಚೌಟರ ಅರಮನೆ ಕುಲದೀಪ್ ಎಂ. ಉಪಸ್ಥಿತರಿದ್ದರು.
ಆಶುಕವಿ ರವಿರಾಜ್ ಜೈನ್ ಮೂಡುಬಿದಿರೆ ಅವರು ಭಕ್ತಿಗಾಯನ, ಗಣೇಶಪ್ರಸಾದ್ ಜೀ ಅವರು ಕವನ ವಾಚನ, ಅನನ್ಯಾ ಜೈನ್ ಅವರು ಭರತನಾಟ್ಯ ಹಾಗೂ ಮಹಾರಾಷ್ಟ್ರದ ಉದ್ಗಾಂವ್‍ನ ಜೈನ ಸಂಗೀತ ಗಾನರತ್ನಾಕರ ಕುಬೇರ ಚೌಗುಲೆ ಅವರು ಭಕ್ತಿ ರಸಮಂಜರಿ ನಡೆಸಿಕೊಟ್ಟರು. ಉಪನ್ಯಾಸಕ ನೇಮಿರಾಜ್ ನಿರೂಪಿಸಿದರು. ಬಳಿಕ ಚಂದ್ರಪ್ರಭಾ ಸ್ವಾಮಿಯ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ಜರುಗಿತು.
Kshetra Samachara
26/12/2020 06:00 pm