ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ನ 2022 23 ನೇ ಸಾಲಿನ ಗ್ರಾಮಸಭೆ ಪಂಚಾಯಿತಿಯ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಅಧ್ಯಕ್ಷೆ ಸುಗುಣ ನೇತೃತ್ವದಲ್ಲಿ ನಡೆಯಿತು.
ಗ್ರಾಮಸಭೆ ಶುರುವಾಗುತ್ತಲೇ ಗ್ರಾಮಸ್ಥರು ಪಂಚಾಯತ್ ವ್ಯಾಪ್ತಿಯ 300 ಎಕರೆ ಪ್ರದೇಶದಲ್ಲಿ ಸರಕಾರದಿಂದ ಕೈಗಾರಿಕೆಗಳಿಗಾಗಿ ಭೂ ಸ್ವಾಧೀನ ವಿರೋಧಿಸಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೆಐಎಡಿಬಿ ಅಧಿಕಾರಿಗಳು ಬೆದರಿಕೆ ತಂತ್ರಗಳನ್ನು ಅನುಸರಿಸಿ ಭೂಸ್ವಾಧೀನ ಪ್ರಕ್ರಿಯೆ ಮಾಡುತ್ತಿದ್ದಾರೆ ಇದಕ್ಕೆ ಗ್ರಾಮಸ್ಥರು ಬಗ್ಗುವುದಿಲ್ಲ ಗ್ರಾಮಸ್ಥರು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಆಗ್ರಹಿಸಿದರು.
ಈ ಸಂದರ್ಭ ಗ್ರಾಮಸ್ಥರನ್ನು ಸಮಾಧಾನಪಡಿಸಿ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಮಾತನಾಡಿ ಪಂಚಾಯತ್ ವ್ಯಾಪ್ತಿಯ ಭೂಸ್ವಾಧೀನಕ್ಕೆ ಬರುವ ಅಧಿಕಾರಿಗಳನ್ನು ಎದುರಿಸೋಣ, ಗ್ರಾಮಸ್ಥರು ಒಗ್ಗಟ್ಟಾಗಿ ಇದ್ದರೆ ಯಾವುದೇ ಕೈಗಾರಿಕೆ ಬರಲು ಸಾಧ್ಯವಿಲ್ಲ ಎಂದರು.
ಗ್ರಾಮಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳ ಗೈರು ಬಗ್ಗೆ ನೋಡಲ್ ಅಧಿಕಾರಿಯನ್ನು ಗ್ರಾಮಸ್ತೆ ಪದ್ಮಿನಿ ತೀವ್ರ ತರಾಟೆಗೆ ತೆಗೆದುಕೊಂಡರು.
ಏಳಿಂಜೆ ಪಟ್ಟೆ ಕ್ರಾಸ್ ಜಂಕ್ಷನ್ ಬಳಿ ಕಳ್ಳ ಸಾಗಾಣಿಕೆ ಸಹಿತ ಇನ್ನಿತರ ದಂಧೆಗಳು ನಡೆಯುತ್ತಿದ್ದು ಸಿಸಿ ಕ್ಯಾಮೆರಾ ಅಳವಡಿಸುವಂತೆ ಗ್ರಾಮಸ್ಥ ಸುಧಾಕರ್ ಸಾಲ್ಯಾನ್ ಒತ್ತಾಯಿಸಿದರು.
ಪಶು ಚಿಕಿತ್ಸೆಗೆ ಬರುವ ಅಧಿಕಾರಿಗಳು ಗ್ರಾಮಸ್ಥರಿಂದ 500ರೂಹಣ ವಸೂಲಿ ಮಾಡುತ್ತಿದ್ದಾರೆ ಎಂದು ದುರ್ಗಾಪ್ರಸಾದ್ ಹೆಗ್ಡೆ ದೂರಿದರು.
ಗ್ರಾಮಸ್ತೆ ಪದ್ಮಿನಿ ಮಾತನಾಡಿ ಪಂಚಾಯತ್ ವ್ಯಾಪ್ತಿಯ ಪಟ್ಟೆ ಕ್ರಾಸ್ ಬಳಿ ಸುಮಾರು 30 ಜನ ಕೂಲಿ ಕಾರ್ಮಿಕರು ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು ಮೂಲಭೂತ ಸೌಕರ್ಯ ಅವ್ಯವಸ್ಥೆಯಿಂದ ಗಲೀಜು ಮಾಡುತ್ತಿದ್ದಾರೆ, ಎಂದು ಆರೋಪಿಸಿದರು.
ಪಟ್ಟೆ ಕ್ರಾಸ್ ಬಳಿ ಅಕ್ರಮ ಮರಳುಗಾರಿಕೆ ತಡೆಯಲು ತೋಡಿರುವ ಹೊಂಡ ಅಪಾಯಕಾರಿಯಾಗಿ ಪರಿಣಮಿಸಿದ್ದು ಕೂಡಲೇ ಮುಚ್ಚುವಂತೆ ಆಗ್ರಹಿಸಿದರು. ಅವರು ಮಾತನಾಡಿ ರಾಷ್ಟ್ರೀಯ ಕುಟುಂಬ ಯೋಜನೆ ಹಾಗೂ ಅಂತ್ಯಸಂಸ್ಕಾರ ಯೋಜನೆಗಳು ಸ್ಥಗಿತವಾಗಿದ್ದು ಈ ಬಗ್ಗೆ ಸರಿಯಾದ ಮಾಹಿತಿ ಯಾಕೆ ನೀಡುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಮಳೆಗಾಲದಲ್ಲಿ ಗ್ರಾಮಸ್ಥರು ಜಾಗೃತರಾಗಿರಬೇಕು, ಕಳ್ಳತನ ತಡೆಯಲು ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಮುಲ್ಕಿ ಠಾಣಾ ಎಎಸ್ಸೈ ಕೃಷ್ಣಪ್ಪ ಹೇಳಿ ಸೈಬರ್ ಕ್ರೈಂ ಬಗ್ಗೆ ಎಚ್ಚರಿಕೆಯಿಂದಿರಿ ಎಂದರು.
ಏಳಿಂಜೆ ಅಂಗಡಿಗುತ್ತು ರಸ್ತೆ ಅವ್ಯವಸ್ಥೆ, ಪ್ರತಿ ಗ್ರಾಮ ಸಭೆಗೆ ಆಡಳಿತ ಪಕ್ಷದ ಸದಸ್ಯರೊಬ್ಬರು ಗೈರುಹಾಜರಿ, ಕಮ್ಮಾಜೆ ಮುರಾರ್ಜಿ ಶಾಲೆಯ ಬದಿಯ ಪೈಪ್ ಕಳವು,, ಉಳೆಪಾಡಿ ಹಾಲಿನ ಸೊಸೈಟಿಗೆ ನಿವೇಶನ ನೀಡುವ ಬಗ್ಗೆ ಗ್ರಾಮಸ್ಥರಾದ ಯೋಗೀಶ್ ಕೋಟ್ಯಾನ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.
ನೋಡಲ್ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಫ್, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
Kshetra Samachara
23/06/2022 02:08 pm