ಮುಲ್ಕಿ: ಗ್ರಾಪಂಗಳಿಗೆ ಬಹುನಿರೀಕ್ಷಿತ ಮೊದಲ ಹಂತದ ಚುನಾವಣೆ ಮಂಗಳವಾರ ನಡೆದಿದ್ದು, ಫಲಿತಾಂಶ ಡಿ. 30ರಂದು ಪ್ರಕಟವಾಗಲಿದೆ.
ಸುರತ್ಕಲ್ ಬಳಿಯ ಚೇಳಾರು, ಸೂರಿಂಜೆ, ಬಾಳ, ಜೋಕಟ್ಟೆ, ಚೇಳಾಯರು, ಮುಲ್ಕಿ ಹೋಬಳಿಯ 7 ಪಂಚಾಯಿತಿ ವ್ಯಾಪ್ತಿಗಳಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ.
ಕೆಲವು ಕಡೆ ಸಣ್ಣಪುಟ್ಟ ಘಟನೆ ಬಿಟ್ಟರೆ ಉಳಿದಂತೆ ಮತದಾನ ಶಾಂತಿಯುತವಾಗಿ ನಡೆದಿದೆ. ಮುಲ್ಕಿ ಹೋಬಳಿಯ ಏಳಿಂಜೆ ಶಾಲೆ ಬಳಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ಕಾರ್ಯಕರ್ತರು ನಿಯಮ ಗಾಳಿಗೆ ತೂರಿ ಕ್ಯಾನ್ವಾಸ್ ನಡೆಸುತ್ತಿರುವುದನ್ನು ಆಕ್ಷೇಪಿಸಿ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದರೂ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡುವೆ ಸ್ಥಳಕ್ಕೆ ಆಗಮಿಸಿದ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಪೊಲೀಸರ ನಿರ್ಲಕ್ಷ್ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪೊಲೀಸರು ಆಡಳಿತಾರೂಢ ಪಕ್ಷದ ಕೈಗೊಂಬೆಯಾಗಿ
ದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಮಂಗಳೂರು ತಾಲೂಕಿನಲ್ಲಿ ಒಟ್ಟು 45028 ಪುರುಷ, 50273 ಮಹಿಳಾ ಮತದಾರರು ಸೇರಿದಂತೆ ಒಟ್ಟು 95301 ಮತದಾರರಿದ್ದು, ಈ ಪೈಕಿ
ಶೇ. 72.43 ಪುರುಷರು, ಶೇ. 75.04 ಮಹಿಳೆಯರು ಮತ ಚಲಾಯಿಸಿದ್ದು, ತಾಲೂಕಿನಲ್ಲಿ ಶೇ. 73.78 ಮತದಾನವಾಗಿದೆ. ಸಂಜೆ ವೇಳೆಗೆ ಮುಲ್ಕಿ ಹೋಬಳಿಯ ಅತಿಕಾರಿ ಬೆಟ್ಟು ಶೇ.66, ಕೆಮ್ರಾಲ್ ಶೇ. 74, ಕಿಲ್ಪಾಡಿ ಶೇ. 69.5, ಐಕಳ ಶೇ.67.5, ಬಳ್ಕುಂಜೆ ಶೇ.66.8 ಹಳೆಯಂಗಡಿ ಶೇ.75 ಪಡುಪಣಂಬೂರು ಶೇ. 68.6 ಮತದಾನ ನಡೆದಿದ್ದು, ಸೋಲು- ಗೆಲುವಿನ ಲೆಕ್ಕಾಚಾರದ ಬೆಟ್ಟಿಂಗ್ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
Kshetra Samachara
22/12/2020 11:00 pm