ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಪಿಎಲ್ ಕಾರ್ಡ್ ಅರ್ಜಿ ಸ್ವೀಕಾರ ತಕ್ಷಣ ಆರಂಭವಾಗಲಿ: ಶಾಸಕ ಯು.ಟಿ. ಖಾದರ್

ಬಂಟ್ವಾಳ: ಬಿಪಿಎಲ್ ಕಾರ್ಡುಗಳ ಅರ್ಜಿ ಸ್ವೀಕಾರ ಗ್ರಾಮೀಣ ಮಟ್ಟದಲ್ಲಿ ಇನ್ನೂ ಆರಂಭಿಸಿಲ್ಲ. ಆನ್ಲೈನ್ ಪ್ರಕ್ರಿಯೆ ತಕ್ಷಣ ಆರಂಭಿಸಬೇಕು. ಜನರು ತಾಳ್ಮೆ ಕಳೆದುಕೊಳ್ಳುವ ಮುನ್ನ ಸರ್ಕಾರ ಬಡವರ ಆಹಾರ ಹಕ್ಕನ್ನು ಕಸಿಯದೆ ನ್ಯಾಯ ಒದಗಿಸಬೇಕು ಎಂದು ಉಳ್ಳಾಲ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ತಾಲೂಕಿನ ಗ್ರಾಮಗಳ 94ಸಿ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೋಮವಾರ ಸಂಜೆ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ ಉಪಸ್ಥಿತಿಯಲ್ಲಿ ಸೌಲಭ್ಯ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಂಟ್ವಾಳ ತಾಲೂಕಿನ ಭಾಗದಲ್ಲಿ 94ಸಿಗೆ ಮೂರುವರೆ ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಸುಮಾರು ಎರಡೂವರೆ ಸಾವಿರ ಹಕ್ಕುಪತ್ರ ಕೊಡುವ ಬೇಡಿಕೆ ಈಡೇರಿಸಿದ್ದೇವೆ. ಒಂದು ಸಾವಿರದಷ್ಟು ಅರ್ಜಿ ತಿರಸ್ಕರಿಸಲಾಗಿದೆ. ಈ ಕುರಿತು ಎಸಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದ ಖಾದರ್, ಯಾರಿಗೆಲ್ಲ ಹಕ್ಕುಪತ್ರ ಕೊಟ್ಟಿದ್ದಾರೆ ಗ್ರಾಪಂ ತಕ್ಷಣ ಖಾತಾ ಮಾಡಿ ಕೊಡಬೇಕು, ಗ್ರಾಮೀಣ ಪ್ರದೇಶದ ಜನರನ್ನು ಕಚೇರಿಗಳಲ್ಲಿ ಸತಾಯಿಸಬಾರದು, ವಿಳಂಬ ಧೋರಣೆ ಅನುಸರಿಸಿದರೆ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ತುಂಬೆಯಿಂದ ಸಜಿಪಕ್ಕೆ ಸಂಪರ್ಕ ಸೇತುವೆ ನಿರ್ಮಾಣ ಸರ್ಕಾರದ ಮಂಜೂರು ಹಂತದಲ್ಲಿದೆ ಎಂದು ಹೇಳಿದ ಅವರು, ಈಗಾಗಲೇ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿ ಆಗುತ್ತಿದೆ. ಫಜೀರು ಕಂಬಳಪದವು ಸಂಪರ್ಕ ರಸ್ತೆ ಸಹಿತ ಎಲ್ಲ ರಸ್ತೆಗಳ ಕಾಮಗಾರಿ ಆರಂಭಗೊಂಡಿದೆ. ಚೇಳೂರಿಂದ ಚಟ್ಟೆಕಲ್ಲು ಮೂಲಕ ಇರಾ ಕುಂಡಾವು ಸಂಪರ್ಕ ರಸ್ತೆ 7.5 ಕೋಟಿ ರೂ. ವೆಚ್ಚದಲ್ಲಿ ಶಂಕುಸ್ಥಾಪನೆ ಆಗಿದೆ. ಗ್ರಾಮೀಣ ಸಂಪರ್ಕ ರಸ್ತೆ ನಿರ್ಮಾಣ ನಡೆಯುತ್ತಿದೆ ಎಂದು ಹೇಳಿದರು. ಕುಡಿಯುವ ನೀರು ಒದಗಿಸಲು ಸಜೀಪಮುನ್ನೂರು ಗ್ರಾಮದ ನೇತ್ರಾವತಿ ಕಿನಾರೆಯಲ್ಲಿ ಜಾಕ್ ವೆಲ್ ಆಗುತ್ತಿದ್ದು, ಇದರ ಮೂಲಕ ಜನರಿಗೆ ನೀರೊದಗಿಸಲಾಗುತ್ತದೆ ಎಂದು ಹೇಳಿದರು.

ಉಳ್ಳಾಲ ತಾಲೂಕಿನ ವ್ಯಾಪ್ತಿಗೆ ಬಂಟ್ವಾಳ ತಾಲೂಕಿನ ಭಾಗಗಳ ಸೇರ್ಪಡೆ ಕುರಿತ ವಿಚಾರಕ್ಕೆ ಉತ್ತರಿಸಿದ ಖಾದರ್, ತುಂಬೆ, ಮೇರೆಮಜಲು, ಪುದು ಕೊಡ್ಮಣ್ ಹೊರತುಪಡಿ, ಇತರ ಭಾಗಗಳ ಸೇರ್ಪಡೆಯಾಗಲಿದೆ ಎಂದರು. ತಾತ್ಕಾಲಿಕವಾಗಿ ನಾಟೆಕಲ್ ಉಳ್ಳಾಲ ತಾಲೂಕು ಕೇಂದ್ರ ಕಾರ್ಯಾಚರಣೆ ನಡೆಯಲಿದೆ ಎಂದರು.

ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಇರಾ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪುದು ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪ್ರಮುಖರಾದ ಮುರಳೀಧರ ಶೆಟ್ಟಿ ನರಿಂಗಾನ, ಇಕ್ಬಾಲ್, ಶಮೀರ್ ಫಜೀರ್, ಮಜೀದ್ ಫರಂಗಿಪೇಟೆ, ವೃಂದಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

12/10/2020 08:55 pm

Cinque Terre

4.93 K

Cinque Terre

0

ಸಂಬಂಧಿತ ಸುದ್ದಿ