ಬಂಟ್ವಾಳ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಎಂಬಲ್ಲಿ ಮಸೀದಿ ಮುಂಭಾಗ ಮಂಗಳವಾರ ಬೆಳಗ್ಗೆ ಗ್ಯಾಸ್ ಟ್ಯಾಂಕರ್ ಒಂದು ಮಗುಚಿಬಿದ್ದ ಪರಿಣಾಮ ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಕಲ್ಲಡ್ಕ ಮತ್ತು ಮಾಣಿ ಮಧ್ಯೆ ವಾಹನ ಸಂಚಾರ ಸ್ಥಗಿತಗೊಂಡಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಲೀ, ಗ್ಯಾಸ್ ಸೋರಿಕೆಯಾಗಲೀ ನಡೆಯದಿದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿಹೋಯಿತು. ಬೆಳಗ್ಗೆ ಸುಮಾರು 4 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ. ವಿಟ್ಲ ಎಸ್.ಐ.ವಿನೋದ್ ರೆಡ್ಡಿ, ಬಂಟ್ವಾಳ ಟ್ರಾಫಿಕ್ ಎಸ್.ಐ. ರಾಜೇಶ್ ಸಹಿತ ಬಂಟ್ವಾಳ ಪೊಲೀಸರು ಸಂಚಾರ ನಿಯಂತ್ರಣದೊಂದಿಗೆ ತೆರವು ಕಾರ್ಯಾಚರಣೆಯನ್ನು ಆರಂಭಿಸಿದರು. ಮಧ್ಯಾಹ್ನ 2 ಗಂಟೆಯ ವೇಳೆಗೆ ಕ್ರೇನ್ ಮೂಲಕ ಮಗುಚಿದ ಟ್ಯಾಂಕರ್ ಅನ್ನು ಮೊದಲಿನಂತೆ ಮಾಡಲಾಯಿತು. ಬಳಿಕ ಅದನ್ನು ರಸ್ತೆಯಿಂದ ಬೇರೆಡೆಗೆ ಸರಿಸಲಾಯಿತು. ಅಷ್ಟು ಹೊತ್ತಿಗಾಗಲೇ ವಾಹನಗಳು ಎರಡೂ ಬದಿ ಸಾಲುಗಟ್ಟಿ ನಿಂತಿದ್ದವು. ವಿಟ್ಲ, ಬಂಟ್ವಾಳ ಟ್ರಾಫಿಕ್ ಠಾಣೆಯ ಪೊಲೀಸ್ ಸಿಬ್ಬಂದಿ ಜೊತೆ ಅಗ್ನಿಶಾಮಕದಳದ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಸಹಕರಿಸಿದರು.
Kshetra Samachara
02/02/2021 10:21 pm