ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಬಿಬಿಎ ವಿಭಾಗದ ವತಿಯಿಂದ ರಾಜ್ಯ ಮಟ್ಟದ `ಉದ್ಗಮ್ 2022’ ಮ್ಯಾನೇಜ್‌ಮೆಂಟ್ ಫೆಸ್ಟ್ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅರೆಕಾ ಟೀ ಸಂಸ್ಥಾಪಕ ನಿವೇದನ್ ನೆಂಪೆ ಮಾತನಾಡಿ, ಉದ್ಯಮಿಯಾಗಬೇಕೆಂದು ಬಯಸುವವರು ಮೊದಲು ಸಮಸ್ಯೆಯನ್ನು ಗುರುತಿಸಬೇಕು ತದನಂತರ ಅದಕ್ಕೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಉದ್ಯಮ ಪ್ರಾರಂಭಿಸಬೇಕು. ಆತ್ಮವಿಶ್ವಾಸದಿಂದ ಉದ್ಯಮ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ತರಬಹುದು ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೆಜ್‌ಮೆಂಟ್ ಟ್ರಸ್ಟಿ ವಿವೇಕ ಆಳ್ವ, ಮೊದಲು ಉದ್ಯಮ ಪ್ರಾರಂಭಿಸಬೇಕಾದರೆ ಅದರ ಉದ್ದೇಶದ ಬಗ್ಗೆ ಅರಿವಿರಬೇಕು. ಉದ್ಯಮ ಪ್ರಾರಂಭಿಸಿದಾಗ ಆರಂಭಿಕ ಹಂತದಲ್ಲಿ ಸಾಕಷ್ಟು ಬಾರಿ ಎಡವುದು ಸಹಜ. ದೃತಿಗೆಡದೆ ನಡೆದು ಗುರಿ ಮುಟ್ಟಿದಾಗಲೇ ನಿಜವಾದ ಸಾಧನೆಯ ರುಚಿ ಸವಿಯಲು ಸಾಧ್ಯ ಎಂದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅನುಮಪ ಫೀಡ್ಸ್ ಆ್ಯಂಡ್ ಫಾರ್ಮ್ಸ್ ಮಾಲಕ ವಿನ್ಸೆಂಟ್ ಕುಟಿನ್ಹಾ, ಉದ್ಯಮ ಕ್ಷೇತ್ರದಲ್ಲಿ ಸೋಲು-ಗೆಲುವು ಸಾಮಾನ್ಯ, ಹಿಂದೆ ಉದ್ಯಮ ನಡೆಸಲು ಯಾವುದೇ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಸಿಗುತ್ತಿರಲಿಲ್ಲ. ಆದರೆ ಇಂದು ವ್ಯಾಪಕವಾಗಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಯಶಸ್ವಿ ಉದ್ಯಮಿಗಳಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಬಿಬಿಎ ವಿಭಾಗದ ಡೀನ್ ಸುರೇಖಾ ರಾವ್, ಸಂಯೋಜಕರಾದ ಪ್ರವೀಣ್ ಕುಮಾರ್ ಹಾಗೂ ಸಂಗೀತ ಶ್ಯಾನುಭೋಗ್, ವಿದ್ಯಾರ್ಥಿ ಸಂಯೋಜಕರಾದ ಶ್ರೇಯಸ್ ಎಂ. ಆರ್ ಹಾಗೂ ರಫೀಯಾ ಫಾತಿಮಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಭಿಷೇಕ್ ಸಾಲ್ಗಿರಿ ಸ್ವಾಗತಿಸಿ, ಧನುಷ್ ವಂದಿಸಿ, ವಿದ್ಯಾರ್ಥಿನಿ ನಂದಿನಿ ನಿರೂಪಿಸಿದರು.
ಫೆಸ್ಟ್ನಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಮಂಗಳೂರಿನ ಕೆನರಾ ಕಾಲೇಜು ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.
Kshetra Samachara
02/08/2022 07:48 pm