ಮೂಡುಬಿದಿರೆ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಖಂಡಿಸಿ ಸಾಲು ಸಾಲು ರಾಜೀನಾಮೆಗಳು ಶುರುವಾಗಿದ್ದು ಇದೀಗ ಮುಲ್ಕಿ-ಮೂಡಬಿದಿರೆ ಬಿಜೆಪಿಗೂ ಬಿಸಿ ಮುಟ್ಟಿದೆ. ಮುಲ್ಕಿ -ಮೂಡುಬಿದಿರೆಯ ಬಿಜೆಪಿಯ ಮಂಡಲದ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಸುಧಾಕರ್ ಡಿ ಪೂಜಾರಿ, ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಕೋಷ್ಠದ ಸಂಚಾಲಕರಾದ ಸತ್ಯ ನಿಡ್ಡೋಡಿ, ಸಾಮಾಜಿಕ ಜಾಲತಾಣದ ಸಹಸಂಚಾಲಕರಾದ ಸಚಿನ್ ಪಣಪಿಲ, ಪಣಪಿಲ ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ದೀಕ್ಷಿತ್ ಪಣಪಿಲ, ತಮ್ಮ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದಾರೆ. ಕಾರ್ಕಳ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಸಂಜೀತ್ ಕೋಟ್ಯಾನ್, ಮಂಗಳೂರು ಉತ್ತರದ ಗುರುಪುರ ಯುವಮೋರ್ಚಾ ಅಧ್ಯಕ್ಷ ಹಾಗೂ ಪಂಚಾಯತ್ ಸದಸ್ಯ ಸಂಪತ್ ರಾಜ್, ಬೆಳ್ತಂಗಡಿಯ ಯುವಮೋರ್ಚಾ ತಾಲೂಕು ಸಂಚಾಲಕ ಉಮೇಶ್ ಕುಲಾಲ್, ಮಹಾಶಕ್ತಿಕೇಂದ್ರದ ಸಂಚಾಲಕ ಗಣೇಶ್ ಕುಂದರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈಗಾಗಲೇ ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಬೆಂಗಳೂರು ಸಹಿತ ಅನೇಕ ಕಡೆಗಳಲ್ಲಿ ಬಿಜೆಪಿ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು ಬಿಜೆಪಿ ಸರ್ಕಾರಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
Kshetra Samachara
27/07/2022 10:02 pm