ಮೂಡುಬಿದಿರೆ: ಮೂಡುಬಿದಿರೆ ಶ್ರೀ ಧವಲಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಗುರುವಾರ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪುತ್ತೂರು ಸಂತ ಫಿಲೋಮಿನ ಕಾಲೇಜಿನ ಶ್ರೀದೇವಿ ಪ್ರಥಮ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಲತೇಶ್ ದ್ವಿತೀಯ ಹಾಗೂ ಆಳ್ವಾಸ್ ಕಾಲೇಜಿನ ಸುಷ್ಮಾ.ಜಿ.ಕೆ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಎಂಬ ವಿಷಯದ ಕುರಿತು ನಡೆದ ಸ್ಪರ್ಧೆಯನ್ನು ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಅಭಿಜಿತ್ ಎಂ. ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಉಪನ್ಯಾಸಕ ಡಾ| ಪುಂಡಿಕಾಯಿ ಗಣಪಯ್ಯ ಭಟ್ ಮಾತನಾಡಿ, ಇಂದು ಗಾಂಧೀ, ನೆಹರು ಹಾಗೂ ಸುಭಾಶ್ಚಂದ್ರ ಭೋಷ್ ಅವರೊಂದು ಗುಂಪು ಎಂದು ಪ್ರತ್ಯೇಕಿಸಿ ಅವರ ನಡುವೆ ಗೋಡೆ ಕಟ್ಟಿ ಭಿನ್ನಾಭಿಪ್ರಾಯಗಳನ್ನು ತರಲಾಗುತ್ತಿದೆ. ಇಂತಹ ಮಾತುಗಳಿಗೆ ಯುವಜನರು ಹೆಚ್ಚು ಕಿವಿ ಕೊಡದೆ ದೇಶದಲ್ಲಿ ಆಗಿರುವ ಚಳುವಳಿಗಳ ಬಗ್ಗೆ ನಿಷ್ಪಕ್ಷಪಾತವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು, ಸ್ವಾತಂತ್ರ್ಯಕ್ಕಾಗಿ ಹೋರಾಡಿರುವ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳುವಂತಹ ಕೆಲಸವಾಗಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಮಹಾವೀರ್ ಅಜ್ರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕಿ, ಕನ್ನಡ ವಿಭಾಗದ ಮುಖ್ಯಸ್ಥೆ ಮಲ್ಲಿಕಾ ಸ್ವಾಗತಿಸಿದರು. ವಿದ್ಯಾರ್ಥಿನಿ ಅರ್ಪಣಾ ನಿರೂಪಿಸಿದರು. ವಿದ್ಯಾರ್ಥಿ ಆಶೀಶ್ ವಂದಿಸಿದರು.
Kshetra Samachara
15/07/2022 03:58 pm