ಬಂಟ್ವಾಳ: ಶಾಲೆಯಲ್ಲಿ ಮಗುವಿಗೆ ಶಿಕ್ಷಕಿ ಹೊಡೆಯುತ್ತಾರೆ ಎಂದು ಬಂಟ್ವಾಳದಲ್ಲಿ ನಡೆದ ಎಸ್.ಸಿ.ಎಸ್.ಟಿ. ಕುಂದು ಕೊರತೆ ಸಭೆಯಲ್ಲಿ ಮುಖಂಡ ಗಂಗಾಧರ ಆರೋಪಿಸಿದ್ದಾರೆ.
ಪಂಜಿಕಲ್ಲು ಗ್ರಾಮದ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಮಗುವಿಗೆ ಹೊಡೆದ ವಿಚಾರದ ಕುರಿತು ಇಲಾಖೆ ಏನು ಕ್ರಮಕೈಗೊಂಡಿದೆ ಎಂದು ಮುಖಂಡ ಗಂಗಾಧರ್ ಅವರು ಪ್ರಶ್ನಿಸಿದರು.
ಬಂಟ್ವಾಳ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಂದುಕೊರತೆ ಸಮಿತಿ ಸಭೆಯು ಬಂಟ್ವಾಳ ತಹಶೀಲ್ದಾರ್ ಡಾ. ಸ್ಮಿತಾ ರಾಮು ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆಯಿತು.
ದಲಿತ ಮುಖಂಡ ಸತೀಶ್ ಆಶ್ರಮ ಶಾಲೆಯನ್ನು ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿದರು. ವಿಶ್ವನಾಥ ಚಂಡ್ತಿಮಾರ್ ಮಾತನಾಡಿ, ಆಶ್ರಯ ಶಾಲೆಯ ಹಳೆಯ ಕಟ್ಟಡ ಕೆಡವುದಕ್ಕೆ ಆದೇಶವಾಗಿದೆ, ಜತೆಗೆ ಕಟ್ಟಡವನ್ನು ವೀಕ್ಷಿಸಲು ಸಚಿವರಿಗೂ ಮನವಿ ಮಾಡಿದ್ದೇವೆ ಎಂದರು
ಪುರಸಭಾ ಸದಸ್ಯ, ಮುಖಂಡ ಜನಾರ್ದನ ಚಂಡ್ತಿಮಾರ್ ಮಾತನಾಡಿ, ಕಟ್ಟಡವನ್ನು ದುರಸ್ತಿ ಮಾಡುವ ಬದಲು ಹೊಸ ಕಟ್ಟಡ ನಿರ್ಮಾಣಕ್ಕೆ ಶಾಸಕರ ಮೂಲಕ ಪ್ರಸ್ತಾವನೆ ಕಳುಹಿಸಲು ಆಗ್ರಹಿಸಿದರು.
ಕಟ್ಟಡದ ಸಮಸ್ಯೆಯ ಕುರಿತು ಆದ್ಯತೆಯ ನೆಲೆಯಲ್ಲಿ ಗಮನಹರಿಸಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಹಶೀಲ್ದಾರ್ ಡಾ. ಸ್ಮಿತಾ ಅವರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ ಅವರಿಗೆ ಸೂಚಿಸಿದರು.
ಪರಿಶಿಷ್ಟರ ಭೂ ಪರಿವರ್ತನೆ ಆಗದೇ ಇರುವುದರಿಂದ ತೊಂದರೆಯಾಗುತ್ತಿದೆ ಪ.ಪಂಗಡದ ಮುಖಂಡ ಅಶೋಕ್ ನಾಯ್ಕ್ ಅವರು ವಿಷಯ ಪ್ರಸ್ತಾಪಿಸಿದರು.
ತಾಲೂಕಿನ ಸರಕಾರಿ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸಿಬಂದಿಗಳನ್ನು ನಿಯೋಜಿಸುವ ವೇಳೆ ಎಸ್‌ಟಿ, ಎಸ್‌ಸಿಗಳನ್ನು ಪರಿಗಣಿಸಬೇಕು ಎಂದು ಸುರೇಶ್ ಆಗ್ರಹಿಸಿದರು. ತಾ.ಪಂ.ಸಹಾಯಕ ನಿರ್ದೇಶಕ ದಿನೇಶ್ ಉಪಸ್ಥಿತರಿದ್ದರು.
Kshetra Samachara
27/05/2022 11:19 am