ಬಜಪೆ:ಹಿಜಾಬ್ ಧರಿಸಿಕೊಂಡು 12ನೇ ತರಗತಿಯ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಮುಂದಾದ 18 ವಿದ್ಯಾರ್ಥಿನಿಯರಿಗೆ ಶಾಲಾ ಆಡಳಿತ ಆಕ್ಷೇಪಿಸಿದ್ದು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ವಾಮಂಜೂರು ಮಂಗಳಜ್ಯೋತಿ ಹತ್ತಿರದಲ್ಲಿರುವ ರೈಮಂಡ್ಸ್ ಪಿಯು ಕಾಲೇಜಿನಲ್ಲಿ ಸೋಮವಾರ ನಡೆದಿದೆ.
ವಿದ್ಯಾರ್ಥಿಗಳು ಈ ಹಿಂದೆ ಹಿಜಾಬ್ ಹಾಕಿಕೊಂಡೇ ತರಗತಿಗೆ ಹಾಜರಾಗಿದ್ದು, ಈಗ ಹಿಜಾಬ್ ಧರಿಸಿಕೊಂಡೇ ಪರೀಕ್ಷೆ ಬರೆಯುತ್ತೇವೆ ಎಂದು ಸುಮಾರು 18 ಮುಸ್ಲಿಂ ವಿದ್ಯಾರ್ಥಿನಿಯರು ಸೋಮವಾರ ಕಾಲೇಜು ಉಪನ್ಯಾಸಕರಲ್ಲಿ ಪಟ್ಟು ಹಿಡಿದಿದ್ದರು .ಸರ್ಕಾರದ ಆದೇಶದಂತೆ ಹಿಜಾಬ್ ಧರಿಸಿಕೊಂಡು ತರಗತಿಗೆ ಹಾಜರಾಗಲು ಅವಕಾಶವಿಲ್ಲ.ಹಿಜಾಬ್ ಕಳಚಿ ತರಗತಿ ಕೊಠಡಿಯೊಳಗೆ ತೆರಳಿದರೆ ಮಾತ್ರ ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಸ್ಪಷ್ಟಪಡಿಸಿದರು.
ಈ ಸಂದರ್ಭ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಗದ್ದಲ ಉಂಟಾಗಿದ್ದು,ಪರಿಸ್ಥಿತಿಯನ್ನು ಅರಿತ ಪ್ರಾಂಶುಪಾಲರು ಕಂಕನಾಡಿ ಗ್ರಾಮಾಂತರ(ವಾಮಂಜೂರು) ಪೊಲೀಸ್ ಠಾಣೆಗೆ ದೂರು ನೀಡಿದರು. ಸ್ಥಳಕ್ಕಾಗಮಿಸಿದ ಎಸ್‍ಐ ಜಾನ್ಸನ್ ಡಿ'ಸೋಜ ನೇತೃತ್ವದ ಪೊಲೀಸ್ ತಂಡ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು. ಬಳಿಕ ಪ್ರಾಂಶುಪಾಲರು ಕಾಲೇಜಿಗೆ ಆಗಮಿಸಿದ ಕೆಲವು ವಿದ್ಯಾರ್ಥಿನಿಯರ ಪೋಷಕರೊಂದಿಗೆ ವಿಫಲ ಮಾತುಕತೆ ನಡೆಸಿದರು. ಈ ವೇಳೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಬೆಂಬಲ ಸೂಚಿಸಿ ಕಾಲೇಜ್ ಗೇಟ್ ಬಳಿ ಜಮಾಯಿಸಿದ ಮುಸ್ಲಿಂ ಯುವಕರನ್ನು ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಸ್ಥಳದಿಂದ ತೆರಳುವಂತೆ ಪೊಲೀಸರು ಸೂಚಿಸಿದರು.
Kshetra Samachara
22/03/2022 08:00 am