ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಾರಿಂಜ ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಬೇಕು, ಅಕ್ರಮ ಚಟುವಟಿಕೆ, ಅಕ್ರಮ ಕೋರೆ ನಿಲ್ಲಿಸಬೇಕು ಎಂಬ ಭಕ್ತಾದಿಗಳ ಹಾಗೂ ಹಿಂದೂ ಜಾಗರಣಾ ವೇದಿಕೆ ಕೂಗಿಗೆ ಶ್ರೀ ಕ್ಷೇತ್ರದಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ನಡೆದ ಪೂರ್ವಭಾವಿ ಸಭೆಗೆ ಜಿಲ್ಲೆಯ ಸಾದು ಸಂತರು ಬೆಂಬಲವಾಗಿ ನಿಂತಿದ್ದಾರೆ.
ಸೋಮವಾರ ಕಾರಿಂಜ ಕ್ಷೇತ್ರಕ್ಕೆ ಭೇಟಿ ನೀಡಿದ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ, ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಪರಮಪೂಜ್ಯ ಓಂ ಶ್ರೀ ವಿದ್ಯಾನಂದ ಸರಸ್ವತಿ ಮಾತಾಶ್ರೀ ಶಿವಜ್ಞಾನ ಮಂದಿರ ಚಿಲಿಂಬಿ, ತಪೋನಧಿ ನಾಗಸಾಧು ವಿಠಲಗಿರಿ ಮಹಾರಾಜರುಗಳು ಕ್ಷೇತ್ರದಲ್ಲಿ ಆದ ತೊಂದರೆಯ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿಗಳು ಕ್ಷೇತ್ರ ಸುತ್ತಮುತ್ತಲಿನ ಸ್ಥಳದಲ್ಲಿ ಸ್ಪೋಟಕಗಳನ್ನು ಬಳಸಿ ಗಣಿಗಾರಿಕೆ ಮಾಡಿರುವುದರಿಂದ ಶ್ರೀ ಕ್ಷೇತ್ರಕ್ಕೆ ಅಪಾಯವಾಗಿದೆ ಎಂದರು.
ಶ್ರೀ ಕ್ಷೇತ್ರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಮಾತನಾಡಿ ದೇವಸ್ಥಾನದ ಬುಡದಲ್ಲೇ ಕಲ್ಲು ಒಡೆಯಲು ಬಳಸುವ ಸ್ಪೋಟಕಗಳ ದಾಸ್ತಾನು ಹೊಂದಿದೆ. ಇದು ತುಂಬಾ ಅಪಾಯಕಾರಿ. ಸರಕಾರ ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಹಿಂದೂ ಜಾಗರಣಾ ವೇದಿಕೆಯು ಕಲ್ಲಿನ ಕೋರೆ ಸ್ಥಗಿತಗೊಳಿಸಲು ಡಿಸೆಂಬರ್ 20ರೊಳಗೆ ಗಡುವು ನೀಡಿದ್ದು ಮಂಗಳವಾರ ಮಂಗಳೂರಿನ ಜಿಲ್ಲಾದಿಕಾರಿಗೆ ಮುತ್ತಿಗೆ ಹಾಕುವುದಾಗಿ ಹಿಂದು ಜಾಗರಣ ವೇದಿಕೆಯ ಮುಖಂಡರು ಈ ಸಂದರ್ಭ ತಿಳಿಸಿದ್ದಾರೆ.
Kshetra Samachara
21/12/2021 08:55 am