ಬಂಟ್ವಾಳ: ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಮ್ ಅನ್ನು 6 ಮೀ.ಗೆ ಏರಿಸಿದ ಬಳಿಕ ಡ್ಯಾಂನಿಂದ ಹೊರ ಬರುವ ನೀರು ಅಲೆಗಳ ರೂಪದಲ್ಲಿ ನದಿ ಇಕ್ಕೆಲಗಳಿಗೆ ಅಪ್ಪಳಿಸಿದ ಪರಿಣಾಮ ಸುಮಾರು 600 ಮೀ. ಉದ್ದದಲ್ಲಿ ಕೃಷಿ ಭೂಮಿ ನದಿ ಪಾಲಾಗಿದ್ದು, ಶುಕ್ರವಾರ ತುಂಬೆ ಗ್ರಾಮದ ಕೃಷಿ ಭೂಮಿ ಪ್ರದೇಶಕ್ಕೆ ಗ್ರಾ.ಪಂ.ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಬಿ.ತುಂಬೆ ಮಾತನಾಡಿ, ಡ್ಯಾಂನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೃಷಿಕರಿಗೆ ಈ ಅವ್ಯವಸ್ಥೆ ಉಂಟಾಗಿದ್ದು, ಸಮರ್ಪಕ ತಡೆಗೋಡೆ ಮಾಡದೆ ಈ ಸಮಸ್ಯೆ ಉಂಟಾಗಿದೆ. ನದಿಯ ಇಕ್ಕೆಲಗಳಲ್ಲೂ ಈ ರೀತಿ ಕುಸಿದಿದ್ದು, ತುಂಬೆ ಗ್ರಾಮದ 8-9 ಕೃಷಿಕರ ಭೂಮಿ ಜಲಸಮಾಧಿಯಾಗಿದೆ. 600 ಮೀ. ಉದ್ದ ಹಾಗೂ 50 ಮೀ. ಅಗಲಕ್ಕೆ ಕೃಷಿ ಪ್ರದೇಶ ನಾಶವಾಗಿದೆ. ಗ್ರಾ.ಪಂ.ನಿಂದ ಇದಕ್ಕೆ ಯಾವುದೇ ಪರಿಹಾರದ ವ್ಯವಸ್ಥೆಯಿಲ್ಲ, ಹೀಗಾಗಿ ಜಿಲ್ಲಾಡಳಿತ, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೃಷಿಕರಿಗೆ ನ್ಯಾಯ ಕೊಡಬೇಕಿದೆ ಎಂದರು.
ಗ್ರಾ.ಪಂ.ಸದಸ್ಯ ಮಹಮ್ಮದ್ ವಳವೂರು ಮಾತನಾಡಿ, ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗೆ ತತ್ಕ್ಷಣ ಕ್ರಮಕೈಗೊಳ್ಳುವುದು ಅತಿ ಅಗತ್ಯವಾಗಿದೆ. ಈ ಸಮಸ್ಯೆಯ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತಂದು ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಜತೆಗೆ ಬಂಟ್ವಾಳ ಶಾಸಕರು ಕೂಡ ಈ ಕುರಿತು ಗಮನಹರಿಸುವಂತೆ ನಾವು ಮನವಿ ಮಾಡುತ್ತಿದ್ದೇವೆ ಎಂದರು.
ಸ್ಥಳೀಯ ಕೃಷಿಕರಾದ ಲೋಕಯ್ಯ, ಭಾಸ್ಕರ, ಗಂಗಾಧರ, ಪುರುಷೋತ್ತಮ, ಲಿಂಗಪ್ಪ, ಆನಂದ ಶೆಟ್ಟಿ, ಮೊಯಿದ್ದೀನ್ ಅವರ ಕೃಷಿ ಭೂಮಿ ನಾಶವಾಗಿದೆ. ಸುಮಾರು 250ಕ್ಕೂ ಅಧಿಕ ಅಡಿಕೆ ಗಿಡ, ಬಾಳೆ ಗಿಡ, 60ಕ್ಕೂ ಅಧಿಕ ತೆಂಗಿನಮರಗಳು ಈಗಾಗಲೇ ನದಿ ಪಾಲಾಗಿವೆ. 1.22 ಎಕ್ರೆ ಪ್ರದೇಶದಲ್ಲಿ ೫೦ ಸೆಂಟ್ಸ್ ಪ್ರದೇಶ ಈಗಾಗಲೇ ನದಿ ಪಾಲಾಗಿದೆ ಎಂದು ಕೃಷಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ನಿಯೋಗದಲ್ಲಿದ್ದರು.
Kshetra Samachara
24/11/2021 12:09 pm