ಬಂಟ್ವಾಳ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಷಷ್ಟ್ಯಬ್ಧ ಮಹೋತ್ಸವದ ಅಂಗವಾಗಿ ಬಂಟ್ವಾಳ ವಲಯ ಸಮಿತಿ ಆಶ್ರಯದಲ್ಲಿ ಗೋ ಆರಾಧನೆ ಮತ್ತು ಗುರುವಂದನೆ ಕಾರ್ಯಕ್ರಮ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಸೋಮವಾರ ನಡೆಯಿತು.
ಆರಂಭದಲ್ಲಿ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನದಿಂದ ಭಕ್ತಿಯಾತ್ರೆ ಗೋವು ಮೆರವಣಿಗೆಯನ್ನು ಸಾಧ್ವಿ ಮಾತಾನಂದಮಯೀ ಉದ್ಘಾಟಿಸಿದರು. ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಉತ್ತಮ ದೇಶ ನಿರ್ಮಾಣಕ್ಕೆ ಗೋಸಂಪತ್ತು ರಕ್ಷಣೆ ಅಗತ್ಯ. ಷಷ್ಟ್ಯಬ್ಧ ಕಾರ್ಯಕ್ರಮದ ನೆಪದಲ್ಲಿ ಸಮಾಜೋನ್ನತಿಯ ಕಾರ್ಯವನ್ನು ಮಠದ ಅಭಿಮಾನಿಗಳು ಮಾಡುತ್ತಿರುವುದು ಸಂತೋಷದ ವಿಚಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಗೋವನ್ನು ಕೇವಲ ಹಾಲಿಗೋಸ್ಕರ ಸಾಕುವುದಲ್ಲ, ಇದು ಮನೆಯಲ್ಲಿದ್ದರೆ ಪಾಸಿಟಿವ್ ಎನರ್ಜಿ ದೊರಕುತ್ತದೆ. ವೈಜ್ಞಾನಿಕವಾಗಿಯೂ ಗವ್ಯೋತ್ಪನ್ನಗಳು ಹೇಗೆ ಪರಿಸರಸ್ನೇಹಿ ಎಂಬುದು ನಿರೂಪಿತವಾಗಿವೆ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಸೋಂದಾ ಭಾಸ್ಕರ ಭಟ್ ಉಪನ್ಯಾಸ ನೀಡಿ ದೇಶಿಯ ತಳಿಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಭವಿಷ್ಯಕ್ಕೆ ಇದು ಮಾರಕ ಎಂದರು. ಒಡಿಯೂರು ಶ್ರೀ ಷಷ್ಟ್ಯಬ್ದ ಸಮಿತಿ ಕಾರ್ಯಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಷಷ್ಟ್ಯಬ್ದ ಸಮಿತಿಯ ಬಂಟ್ವಾಳ ವಲಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಕಾರ್ಯಾಧ್ಯಕ್ಷ ಡಾ. ತುಕಾರಾಮ ಪೂಜಾರಿ, ಕಾರ್ಯದರ್ಶಿ ಸಂಪತ್ ಕುಮಾರ್ ಶೆಟ್ಟಿ, ಸಂಚಾಲಕ ಸರಪಾಡಿ ಅಶೋಕ್ ಶೆಟ್ಟಿ, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಪ್ರಮುಖರಾದ ಸದಾನಂದ ಶೆಟ್ಟಿ ರಂಗೋಲಿ, ಮಂಜು ವಿಟ್ಲ ಉಪಸ್ಥಿತರಿದ್ದರು. ಮೋಹನದಾಸ ಕೊಟ್ಟಾರಿ ನೇತೃತ್ವದ ಶಾರದಾ ಚೆಂಡೆ ಬಳಗದ ಸಾಂಸ್ಕೃತಿಕ ರಂಗಿನೊಂದಿಗೆ ಮೆರವಣಿಗೆ ಆಕರ್ಷಕವಾಗಿ ಮೂಡಿ ಬಂತು. ಬಳಿಕ ಸ್ವಾಮೀಜಿ ಗೋಪೂಜೆ ನೆರವೇರಿಸಿದರು. ಇದೇ ವೇಳೆ ಗುರುವಂದನಾ ಕಾರ್ಯಕ್ರಮ ಮತ್ತು ಉಚಿತ ಗಾಲಿಕುರ್ಚಿಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಗ್ರ ಕಾರ್ಯಕ್ರಮವನ್ನು ಕಲಾವಿದ ಎಚ್ಕೆ ನಯನಾಡು ನಿರ್ವಹಿಸಿದರು.
Kshetra Samachara
22/11/2021 05:37 pm