ಮೂಲ್ಕಿ: ಉತ್ತರ ಪ್ರದೇಶದ ಹಾಥ್ರಾಸ್ ನಲ್ಲಿ ದಲಿತ ಯುವತಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ದೇಶದಲ್ಲಿ ಮಹಿಳೆಯರು ಸ್ವತಂತ್ರವಾಗಿ ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿನ ಸರಕಾರ ಪ್ರಕರಣ ಮುಚ್ಚುವ ಪ್ರಯತ್ನ ಮಾಡುತ್ತಿದ್ದು, ಸಾಂತ್ವನಕ್ಕೆ ಮನೆಗೆ ಭೇಟಿ ನೀಡಲು ಹೋದ ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡದಿರುವುದು ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಇಂದು ಅವರು ಹಳೆಯಂಗಡಿಯ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಹೊಸ ಹುಮ್ಮಸ್ಸಿನಲ್ಲಿದ್ದು, ಮುಂದಿನ ಉಪಚುನಾವಣೆಯಲ್ಲಿ ಶಿರಾ ಮತ್ತು ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ.
ಆರ್ ಆರ್ ನಗರದಲ್ಲಿ ಪಕ್ಷಾಂತರಿ ಬಿಜೆಪಿಯ ಮುನಿರತ್ನಂ ಅವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದು, ಶಿರಾ ಕ್ಷೇತ್ರದಲ್ಲಿ ಮಾಜಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಕಣಕ್ಕಿಳಿಯಲಿದ್ದು ಜಯ ಗಳಿಸಲಿದ್ದಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ಕೋವಿಡ್ ಭ್ರಷ್ಟಾಚಾರ ಸೇರಿ ಅನೇಕ ಕೋಟಿಗಟ್ಟಲೆಯ ಅವ್ಯವಹಾರ ಹೆಚ್ಚುತ್ತಿದ್ದು ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ ಬೆರ್ನಾಡ್ ಉಪಸ್ಥಿತರಿದ್ದರು.
Kshetra Samachara
02/10/2020 10:40 pm