ಮುಲ್ಕಿ: ಉಭಯ ಜಿಲ್ಲೆಗಳಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವ ಮತ್ತು ಈಡಿಗ ಸಮುದಾಯ ಸಾಮಾಜಿಕ ನ್ಯಾಯದಿಂದ ವಂಚಿತರಾಗುತ್ತಿದ್ದು, ಈ ಬಗ್ಗೆ ಉಡುಪಿಯಲ್ಲಿ ಜರುಗಿದ ಬೃಹತ್ ಬಿಲ್ಲವ ಸಮಾವೇಶದಲ್ಲಿ ಬಿಲ್ಲವ- ಈಡಿಗ ಸಮಾಜದ ಸಾಮಾಜಿಕ ಶೈಕ್ಷಣಿಕ ಔದ್ಯೋಗಿಕ ಅಭಿವೃದ್ಧಿಗೆ ಪೂರಕವಾಗಿ ಬಿಲ್ಲವ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂಬ ನಿರ್ಣಯದ ಜೊತೆ ಸಮಾಜದ ಅಭಿವೃದ್ಧಿಗೆ ಕೆಲ ನಿರ್ಣಯಗಳನ್ನು ತೆಗೆದುಕೊಂಡು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಸರಕಾರ ನಮ್ಮ ಸಮಾಜದ ನಿರ್ಣಯ ಮತ್ತು ಬೇಡಿಕೆ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, ಕೂಡಲೇ ಸರಕಾರ ಬಿಲ್ಲವ ಈಡಿಗ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಸಮಾಜದ ಬಡವರು, ಹಿಂದುಳಿದವರಿಗೆ ಅನುಕೂಲ ಮಾಡಿ ಕೊಡಬೇಕು.
ತುಳುನಾಡಿನ ಸಮಸ್ತ ಜನರ ಹಲವು ವರ್ಷಗಳ ಆಗ್ರಹದಂತೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ- ಚೆನ್ನಯರ ಹೆಸರನ್ನು ಇಡಬೇಕೆಂದು ಅಂದಿನ ಬಜಪೆಯ ಮಳವೂರು ಗ್ರಾಪಂ ಮತ್ತು ದ. ಕ. ಜಿಪಂ ಜನವರಿ 2019 ರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೆಗೆದುಕೊಂಡ ಸರ್ವಾನುಮತದ ತೀರ್ಮಾನದಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಮರುನಾಮಕರಣ ಮಾಡಬೇಕೆಂಬ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲು ನಿರ್ಣಯ ಕೈಗೊಂಡು ಸರಕಾರಕ್ಕೆ ಮುಂದಿನ ಕ್ರಮಗಳಿಗೆ ಕಳುಹಿಸಿಕೊಡಲಾಯಿತು.
ಜಿಪಂ ನಿರ್ಣಯ ಕೈಗೊಂಡು ವಿಧಾನ ಮಂಡಲದ 4 ಅಧಿವೇಶನ ಕಳೆದು ಹೋಯಿತು. ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ , ಕೋಟಿ ಚೆನ್ನಯ ಹೆಸರಿನ ಮರುನಾಮಕರಣದ ಬಗ್ಗೆ ವಿಧಾನ ಮಂಡಲದಲ್ಲಿ ಈ ಬಗ್ಗೆ ಪ್ರಶ್ನೆ ಕೂಡ ಕೇಳಿದ್ದರು. ಆದರೆ, ರಾಜ್ಯ ಸರಕಾರ ನಿರ್ಣಯ ಕೈಗೊಂಡು ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಬೇಕಾದ ಪ್ರಸ್ತಾಪ ಈಗ ಕೂಡ ಕಡತದಲ್ಲಿ ಬಾಕಿಯಾಗಿದೆ. ಉಭಯ ಜಿಲ್ಲೆಗಳ ಶಾಸಕರು ಈ ಪ್ರಸ್ತಾಪ ಬಗ್ಗೆ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಳ್ಳುವಂತೆ ಒತ್ತಡ ಹೇರಿ ವಿಧಾನ ಮಂಡಲದಲ್ಲಿ ಮಾತನಾಡಿ ಮುಂದಿನ ಕ್ರಮಕ್ಕೆ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿ ತುಳುನಾಡಿನ ವೀರ ಪುರುಷರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡಬೇಕೆಂದು ಒತ್ತಾಯ ಮಾಡುತ್ತೇವೆ ಹಾಗೂ ಈ ಬಗ್ಗೆ ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ತುಳುನಾಡಿನ ಸರ್ವ ಜಾತಿ ಧರ್ಮದ ಬಂಧುಗಳನ್ನು ಸೇರಿಸಿಕೊಂಡು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ವತಿಯಿಂದ ತೀವ್ರ ಹೋರಾಟ ಸಂಘಟಿಸಲಾಗುವುದು ಎಂದು ಡಾ. ರಾಜಶೇಖರ್ ಕೋಟ್ಯಾನ್ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
Kshetra Samachara
16/11/2020 03:24 pm