ಬಂಟ್ವಾಳ: ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ಪ್ರವಾದಿ ಮಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ ರಾಷ್ಟ್ರವ್ಯಾಪಿ ಸೀರತ್ ಅಭಿಯಾನ ಪ್ರಯುಕ್ತ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಮೂರು ವಿಭಾಗಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.
ಈ ವಿಷಯವನ್ನು ಜಮಾಅತೆ ಇಸ್ಲಾಮಿ ಹಿಂದ್ ಬಂಟ್ವಾಳ ಸಂಚಾಲಕ ಶಾಹುಲ್ ಹಮೀದ್ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಸಂಜೆ ತಿಳಿಸಿದರು.
ಪತ್ರಕರ್ತರಿಗೆ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಮಾಜ ಸುಧಾರಣೆಗೆ ಪ್ರವಾದಿ ಮುಹಮ್ಮದ್ (ಸ)ರ ಕೊಡುಗೆ, ವಕೀಲರಿಗೆ ಮತ್ತು ಕಾನೂನು ವಿದ್ಯಾರ್ಥಿಗಳಿಗೆ ಪ್ರವಾದಿ ಮುಹಮ್ಮದ್ (ಸ) ರ ಸಾಮಾಜಿಕ ನ್ಯಾಯದ ಪರಿಕಲ್ಪನೆ, ಶಿಕ್ಷಕರಿಗೆ, ಶಿಕ್ಷಣ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರವಾದಿ ಮುಹಮ್ಮದ್ (ಸ)ರ ಕೊಡುಗೆ ವಿಷಯದಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿವೆ. ಪ್ರಬಂಧ ಅಧ್ಯಯನಾತ್ಮಕ, ಸ್ವರಚಿತ, ಸ್ವತಂತ್ರವಾಗಿರಬೇಕು, ಎಲ್ಲಿಯೂ ಪ್ರಕಟವಾಗಿರಬಾರದು, ಫುಲ್ ಸ್ಕೇಪ್ ಬಿಳಿ ಹಾಳೆಯ ಒಂದೇ ಮಗ್ಗುಲಲ್ಲಿ ಎಂಟು ಪುಟಗಳಿಗೆ ಮೀರಬಾರದು, ತಮ್ಮ ಗುರುತುಚೀಟಿ ಅಥವಾ ಮೊಹರಿನೊಂದಿಗೆ ಪತ್ರಕರ್ತರು, ನ್ಯಾಯವಾದಿಗಳು ಹಾಗೂ ಪ್ರಾಂಶುಪಾಲರ ಸಹಿಯೊಂದಿಗೆ ಶಿಕ್ಷಕರು, ವಿದ್ಯಾರ್ಥಿಗಳು ಪ್ರಬಂಧವನ್ನು ಡಿಸೆಂಬರ್ 10ರೊಳಗೆ ಮುಖತಃ, ಅಂಚೆ, ಕೊರಿಯರ್ ಮೂಲಕ ತಮ್ಮ ಭಾವಚಿತ್ರದೊಂದಿಗೆ ಸೀರತ್ ಪ್ರಬಂಧ ಸ್ಪರ್ಧೆ 2020 ಎಂದು ಬರೆದು, ತಮ್ಮ ವಿಭಾಗ ನಮೂದಿಸಿ ಕಳುಹಿಸಬೇಕು.
ಪ್ರಬಂಧ ಸ್ಪರ್ಧಾ ಸಮಿತಿ, ಪ್ರವಾದಿ ಮುಹಮ್ಮದ್ (ಸ) ಸೀರತ್ ಅಭಿಯಾನ 2020, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು 575001 ವಿಳಾಸಕ್ಕೆ ಕಳುಹಿಸಬಹುದು. ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ 10 ಸಾವಿರ ಮತ್ತು ತೃತೀಯ 5 ಸಾವಿರ ರೂ. ಎಂದರು. ಸುದ್ದಿಗೋಷ್ಠಿಯಲ್ಲಿ ಬಿ.ಸಿ.ರೋಡ್ ಶಾಖಾಧ್ಯಕ್ಷ ಅಮಾನುಲ್ಲಾ ಖಾನ್, ಸದಸ್ಯರಾದ ಸಿ.ಅಬ್ದುಲ್ಲಾ ಪಾಣೆಮಂಗಳೂರು, ಅಬ್ದುಲ್ ಮುತಾಲಿಕ್ ಮತ್ತಿತರರು ಇದ್ದರು. ಮಾಹಿತಿಗೆ 9448122361, 9845665198, 08242422786 ಸಂಪರ್ಕಿಸಬಹುದು ಎಂದರು.
Kshetra Samachara
13/11/2020 08:57 pm