ಮುಲ್ಕಿ: ಹಳೆಯಂಗಡಿ ಗ್ರಾ. ಪಂ. ನಲ್ಲಿ ನೀರು ಸರಬರಾಜು ಮಾಡುತ್ತಿರುವ ಸಿಬ್ಬಂದಿಗಳಿಗೆ ಕಳೆದ ಆರು ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿರುವ ಅಧಿಕಾರಿ ವರ್ಗದವರ ವಿರುದ್ಧ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೆಯಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 7 ಮಂದಿ ನೀರು ಬಿಡುವ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಓರ್ವ ಸಿಬ್ಬಂದಿ ಅನುಮೋದನೆ ಪಡೆದಿರುತ್ತಾರೆ.
ಅವರಿಗೆ ಸರಕಾರ ನೇರವಾಗಿ ವೇತನ ನೀಡುತ್ತಿದೆ. ಉಳಿದಂತೆ 4 ಸಿಬ್ಬಂದಿಗಳಿಗೆ ಸಮಿತಿಯ ಮೂಲಕ ವೇತನ ಮೊದಲು ನೀಡುತ್ತಿದ್ದು, ಈಗ 6 ತಿಂಗಳಿಂದ ವೇತನ ಇಲ್ಲದಂತಾಗಿದೆ.
ಉಳಿದ ಇಬ್ಬರಿಗೆ ಪಂಚಾಯತಿನ ಸ್ವಂತ ಆದಾಯದಲ್ಲಿ ವೇತನ ನೀಡಿದ್ದಾರೆ. ಬಾಕಿ ವೇತನ ಕೇಳಿದರೆ 'ನೀವು ಗ್ರಾಹಕರ ನೀರಿನ ಬಿಲ್ ವಸೂಲಿ ಮಾಡಿ ಬನ್ನಿ.
ಅದು ಕಲೆಕ್ಷನ್ ಆದರೆ ವೇತನ ಕೊಡುತ್ತೇವೆ' ಎಂದು ಸಬೂಬು ನೀಡುತ್ತಾರೆ. ಕೊರೊನಾ ಸಂದರ್ಭ ಯಾವುದೇ ಆದಾಯ ಇಲ್ಲದೆ ಗ್ರಾಮಸ್ಥರು ನೀರಿನ ಬಿಲ್ ಬಾಕಿ ಇಟ್ಟಿದ್ದಾರೆ.
ಇದಕ್ಕೆ ಪಂಪ್ ಆಪರೇಟರ್ ಕಾರಣವೇ? ಎಂಬ ಪ್ರಶ್ನೆ ಉದ್ಭವವಾಗಿದೆ. ವಿಶೇಷ ಎಂದರೆ ಪಂಚಾಯಿತಿಗೆ ಹೊಸ ಅಧಿಕಾರಿ ಬಂದನಂತರ ನೇಮಕವಾದ ಇಬ್ಬರು ಸಿಬ್ಬಂದಿಗಳಿಗೆ ನೀರಿನ ಶುಲ್ಕ ವಸೂಲಿ ಆಗದಿದ್ದರೂ ಪಂಚಾಯತ್ ಸ್ವಂತ ನಿಧಿಯಿಂದ ಪ್ರತಿ ತಿಂಗಳು ಸಂಬಳ ಆಗುತ್ತಿದೆ.
ಆದರೆ ಹಿಂದಿನ 4 ಸಿಬ್ಬಂದಿಗಳಿಗೆ ವೇತನ ಕೊಡದೆ 6 ತಿಂಗಳಾದರೂ ಅಧಿಕಾರಿ ಚಕಾರ ಎತ್ತುವುದಿಲ್ಲ ಎಂಬ ದೂರುಗಳು ಕೇಳಿಬಂದಿದೆ.
ಈ ಬಗ್ಗೆ ಪಂಚಾಯತ್ ಆಡಳಿತಾಧಿಕಾರಿ ಮುಲ್ಕಿ ವಿಶೇಷ ತಹಸೀಲ್ದಾರ್ ಮಾಣಿಕ್ಯ ಬಳಿಯೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಿಬಂದಿಗಳುಅಳಲು ತೋಡಿಕೊಂಡಿದ್ದಾರೆ.
ಗ್ರಾ.ಪಂ.ನಲ್ಲಿ ಸಿಬ್ಬಂದಿಗಳಿಗೆ ಈ ರೀತಿಯ ದ್ವಂದ್ವ ನಿಲುವು ತಾಳುತ್ತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Kshetra Samachara
04/11/2020 09:59 am