ಸುಳ್ಯ: ವಿಶ್ವ ವಿಖ್ಯಾತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ದೇವಾಲಯದ ಆಭರಣಗಳನ್ನು ಅವ್ಯವಹಾರ ನಡೆಸಿರುವ ನೇರ ಆರೋಪ ಕೇಳಿಬಂದಿದೆ.
ದೇವಾಲಯದ ಆಡಳಿತಾಧಿಕಾರಿ ಶ್ರೀಮತಿ ರೂಪಾ ಎಂ.ಜೆ ಹಾಗೂ ದೇಗುಲದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ರವೀಂದ್ರ ಎಂ.ಎಚ್ ಅವರ ವಿರುದ್ಧ ಸುಬ್ರಹ್ಮಣ್ಯದ ನಿವಾಸಿ ಶ್ರೀನಾಥ್ ಟಿ.ಎಸ್. ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಂಗಳೂರಿನ ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಅಧೀಕ್ಷಕರಿಗೆ ದೂರು ದಾಖಲಿಸಿದ್ದು, ತನಿಖೆ ನಡೆಸುವಂತೆ ಕೋರಿದ್ದಾರೆ.
ಕರ್ನಾಟಕ ರಾಜ್ಯ ಸರಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಡಳಿತದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕೃತ ದಾಖಲಾತಿ ಪುಸ್ತಕದಲ್ಲಿ ದಾಖಲಾಗಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಜ್ರದ ಕಂಠಿಹಾರ, ಆಭರಣಗಳು, ಶ್ರೀ ಸತ್ಯನಾರಾಯಣ ದೇವರ ಫೋಟೋ , ಶ್ರೀ ಕುಕ್ಕೆ ಲಿಂಗ ದೇವಳದ ಬಳಿ ಇದ್ದ ಬೆಳ್ಳಿಯ ಒಡವೆಗಳು, ಪುರಾತನ ಕಾಲದ ವಿಗ್ರಹಗಳು ನಾಪತ್ತೆಯಾಗಿವೆ. ಈ ಬಗ್ಗೆ ದೇವಾಲಯದ ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮೋನಪ್ಪ ಮಾನಾಡು ಅವರು 22/10/2019 ರಂದೇ ದೇವಾಲಯದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ರವೀಂದ್ರ ಎಂ.ಎಚ್ ಅವರಿಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ಆಡಳಿತ ಮಂಡಳಿ ನೀಡಿಲ್ಲ ಎನ್ನಲಾಗಿದೆ.
ಈ ವಿಚಾರವಾಗಿ 01/08/2020 ರಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ನಿರ್ದೇಶಕರಾಗಿರುವ ಶ್ರೀನಾಥ್ ಟಿ.ಎಸ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರೂ ಇಲ್ಲಿಯವರೆಗೂ ಆಡಳಿತಾಧಿಕಾರಿಯಾಗಲಿ, ಕಾರ್ಯ ನಿರ್ವಹಣಾಧಿಕಾರಿಯೇ ಆಗಲಿ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಆಗ್ರಹಿಸಿದ್ದಾರೆ.
Kshetra Samachara
22/10/2020 06:42 pm