ಪುತ್ತೂರು: ಬಹು ದಿನದ ಬೇಡಿಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯನ್ನು ಪುತ್ತೂರಿ ಸಮೀಪದ ಬನ್ನೂರಿಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಂದನೆ ನೀಡಿದ್ದಾರೆ. ಹೀಗಾಗಿ ಜನವರಿಯೊಳಗೆ ಎಸ್‌ಪಿ ಕಚೇರಿ ಸ್ಥಳಾಂತರವಾಗಲಿದೆ.
2010ರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯೊಳಗಿದ್ದ ಮಂಗಳೂರು ಮಹಾನಗರವನ್ನು ಪೊಲೀಸ್ ಕಮಿಷನರೆಟ್ ವ್ಯಾಪ್ತಿಗೆ ಸೇರಿಸಲಾಗಿತ್ತು. ಕಮಿಷನರೆಟ್ ಅನ್ನು ಉದ್ಘಾಟಿಸಿದ್ದ ಅಂದಿನ ಗೃಹಸಚಿವ ಡಾ. ವಿ.ಎಸ್. ಆಚಾರ್ಯ ಅವರು ಮಂಗಳೂರಿನಲ್ಲಿರುವ ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಭರವಸೆ ನೀಡಿದ್ದರು.
ಈ ಸಂಬಂಧ ಇತ್ತೀಚೆಗೆ ಶಾಸಕ ಸಂಜೀವ ಮಠಂದೂರು ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರು. ಜೊತೆಗೆ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದರು. ಸದ್ಯ ಎಸ್‌ಪಿ ಕಚೇರಿ ಸ್ಥಾಪನೆಗೆ ನಗರದ ಹೊರವಲಯದ ಬನ್ನೂರಿನಲ್ಲಿ ಕಂದಾಯ ಇಲಾಖೆ 2 ಎಕರೆ ಭೂಮಿ ಗುರುತಿಸಿದೆ. ಪಹಣಿ ಸಂಬಂಧಿಸಿ ಪ್ರಕ್ರಿಯೆ ಪ್ರಗತಿಯಲ್ಲಿದೆ.
Kshetra Samachara
20/10/2020 07:15 pm