ಬಂಟ್ವಾಳ: ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿ ಸುದೀರ್ಘ ಕಾಲ ಸಾರಥ್ಯ ವಹಿಸಿ ಬ್ಯಾಂಕಿನ ಏಳಿಗೆಗೆ, ಆಧುನೀಕರಣಕ್ಕೆ ದೊಡ್ಡ ಕೊಡುಗೆಗೆ ಕಾರಣರಾಗಿದ್ದ ಟಿ.ಅನಂತಕೃಷ್ಣ (74) ಇನ್ನಿಲ್ಲ.
ಮಂಗಳೂರಿನಲ್ಲಿ ವಾಸಿಸುತ್ತಿದ್ದ ಅವರು ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನ ರಾದರು. ಅವರಿಗೆ ಪತ್ನಿ, ಪುತ್ರ ಇದ್ದಾರೆ. ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದ ತಲೆಮೊಗರು ಕುಟುಂಬದವರಾಗಿರುವ ಅವರು, ತಲೆಮೊಗರು ನಾರಾಯಣರಾಯರ ನಾಲ್ವರು ಪುತ್ರರಲ್ಲಿ ಹಿರಿಯವರು. ಸುಮಾರು 1993ರವರೆಗೂ ಬಿ.ಸಿ.ರೋಡಿನ ತನ್ನ ಮನೆಯಲ್ಲಿ ವಾಸಿಸುತ್ತಿದ್ದ ಅವರು ಬಳಿಕ ಮಂಗಳೂರಿಗೆ ಶಿಫ್ಟ್ ಆದರು.
1946ರಲ್ಲಿ ಬಂಟ್ವಾಳ ಸಜೀಪದ ತಲೆಮೊಗರು ಕುಟುಂಬದಲ್ಲಿ ಜನಿಸಿದ ಅನಂತಕೃಷ್ಣ, ಎಸ್.ವಿ.ಎಸ್ ಹೈಸ್ಕೂಲು ಬಂಟ್ವಾಳ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿತು ಮೈಸೂರು ವಿವಿಯಿಂದ ಗಣಿತ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದರು. ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಮೊಡಂಕಾಪು ದೀಪಿಕಾ ಹೈಸ್ಕೂಲು ಮತ್ತು ಮಣಿಪಾಲದ ಎಂಐಟಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಎಚ್ ಎಎಲ್ ಸೇರಿದ ಅವರು, 1971ರಲ್ಲಿ ಕರ್ಣಾಟಕ ಬ್ಯಾಂಕ್ ಸೇರಿದ್ದರು.
ಬ್ಯಾಂಕ್ ನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಅವರು, 1994ರಲ್ಲಿ ಜನರಲ್ ಮ್ಯಾನೇಜರ್ ಆಗಿ ಪದೋನ್ನತಿ ಹೊಂದಿದ್ದರು. 1998ರಲ್ಲಿ ಚೀಫ್ ಜನರಲ್ ಮ್ಯಾನೇಜರ್ ಆಗಿ 2000 ಇಸವಿಯಲ್ಲಿ ಸಿಇಒ ಮತ್ತು ಅಧ್ಯಕ್ಷರಾಗಿ ಆಯ್ಕೆಯಾದರು. ಅತಿ ಹೆಚ್ಚು ಅವಧಿಗೆ ಬ್ಯಾಂಕೊಂದರ ಮುಖ್ಯಸ್ಥರಾಗಿ ದುಡಿದ ಖ್ಯಾತಿ ಅನಂತಕೃಷ್ಣ ಅವರದ್ದು.
ಕರ್ತವ್ಯ ದಕ್ಷತೆ, ಪ್ರಾಮಾಣಿಕತೆ ಮೂಲಕ ಬ್ಯಾಂಕನ್ನು ಉನ್ನತ ಸ್ಥಾನಕ್ಕೇರಿಸಿದ ಕೀರ್ತಿ ಅವರದ್ದು. ಬ್ಯಾಂಕ್ ಡಿಜಿಟಲೀಕರಣಕ್ಕೆ ಅನಂತಕೃಷ್ಣ ಕೊಡುಗೆ ಅಪಾರ. ಪರಂಪರಾಗತ ಶ್ರದ್ಧೆ, ಶ್ರೀಸಾಮಾನ್ಯರ ನಿಕಟ ಸಂಪರ್ಕವನ್ನು ಎಂದಿಗೂ ತ್ಯಜಿಸಲಿಲ್ಲ. ಹೊಸ ತಲೆಮಾರಿನ ಬ್ಯಾಂಕುಗಳೊಂದಿಗೆ ಸ್ಪರ್ಧಿಸುವಂತಹ ಮಟ್ಟ ಮುಟ್ಟಲು ಹಳೆ ತತ್ವ ಹೊಸ ಸತ್ವಗಳ ಸಮ್ಮಿಲನದಿಂದ ಸಾಧ್ಯವಾಗಲು ಅವರ ಪರಿಶ್ರಮ ಅಪಾರ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ಯಾಂಕಿಂಗ್ ನ ನಿಕಟ ಪರಿಚಯ, ನಿಡುಗಾಲದ ಅಧ್ಯಯನ, ಸಂಶೋಧನೆ, ನಿರಂತರ ಸಂಚಾರದ ಫಲಶ್ರುತಿಯಾಗಿ ಕರ್ಣಾಟಕ ಬ್ಯಾಂಕಿಗೆ ಹೊಸ ಸ್ವರೂಪ ದೊರೆಯಿತು. ಲಲಿತಕಲೆಗಳಲ್ಲೂ ಆಸಕ್ತರಾಗಿದ್ದ ಅನಂತಕೃಷ್ಣ, ಯಕ್ಷಗಾನ, ಸಂಗೀತ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ತನ್ನ ಸಂಪರ್ಕಕ್ಕೆ ಬರುವ ಶ್ರೀಮಂತನಿಂದ ಜನಸಾಮಾನ್ಯನ ಬಳಿ ಸಮಾನವಾಗಿ ವ್ಯವಹರಿಸುತ್ತಿದ್ದ ಅವರ ಸರಳತೆ ಅನುಕರಣೀಯ.
Kshetra Samachara
11/10/2020 04:25 pm