ಕುಶಾಲನಗರ: ಮನುಷ್ಯರು ಹುಟ್ಟು ಹಬ್ಬ ಆಚರಿಸಿಕೊಳ್ಳುವುದು ಸಾಮಾನ್ಯ. ಅಲ್ಲದೆ, ಕೆಲವರು ತಾವು ಸಾಕಿದ ಪ್ರಾಣಿ, ಪಕ್ಷಿಗಳ ಹುಟ್ಟು ಆಚರಿಸುವುದು ಕೇಳಿದ್ದೇವೆ.
ಆದರೆ, ಗಿಡ-ಮರಗಳ ಹುಟ್ಟು ಹಬ್ಬ ಆಚರಿಸುವುದು ಎಲ್ಲಾದರೂ ಕೇಳಿದ್ದೀರಾ? ಇಲ್ಲ ಎಂದಾದರೆ ಇದನ್ನೊಮ್ಮೆ ನೀವು ಓದಲೇ ಬೇಕು. ಅಂದ ಹಾಗೆ, ಇದು ನಡೆದಿರುವುದು ಕರ್ನಾಟಕದ ಕಾಶ್ಮೀರ ಎಂದೇ ಕರೆಯಲ್ಪಡುವ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನಲ್ಲಿ.
ಕುಶಾಲನಗರದಲ್ಲಿ ಕಾರ್ಯಾಚರಿಸುತ್ತಿರುವ ಕಾವೇರಿ ಪರಿಸರ ರಕ್ಷಣಾ ಬಳಗ ಗಿಡ-ಮರಗಳ ಹುಟ್ಟು ಹಬ್ಬ ವಿಶೇಷವಾಗಿ ಆಚರಿಸಿದೆ.
ಗಿಡ-ಮರಗಳ ಹುಟ್ಟು ಹಬ್ಬ ಆಚರಿಸುವುದೇ ವಿಶೇಷ ಎಂದರೆ, ಅದಕ್ಕಿಂತಲೂ ವಿಶೇಷ ಮನುಷ್ಯರಂತೆಯೇ ಈ ಹುಟ್ಟುಹಬ್ಬದ ಆಚರಣೆಯಲ್ಲೂ ಕೇಕ್ ಕಟ್ ಮಾಡಲಾಗಿದೆ.
ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರೂ ಮತ್ತು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಕೇಕ್ ಕಟ್ ಮಾಡುವ ಮೂಲಕ ಗಿಡ-ಮರಗಳ ಹುಟ್ಟು ಹಬ್ಬ ಅದ್ಧೂರಿಯಾಗಿ ಆಚರಿಸಿದರು.
ಅಲ್ಲದೆ, ನೆರೆದ ಸಾರ್ವಜನಿಕರೆಲ್ಲರಿಗೂ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಗಿಡ ವಿತರಿಸಲಾಯಿತು.
ಪರಿಸರ ರಕ್ಷಣಾ ಬಳಗದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
09/10/2020 09:54 pm