ಮಂಗಳೂರು: ಬಸ್ ಡಿಕ್ಕಿ ಹೊಡೆದು ಪಾದಚಾರಿ ಸಾವಿಗೆ ಕಾರಣವಾದ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಏಳನೇ ಜೆಎಂಎಫ್‌ಸಿ ನ್ಯಾಯಾಲಯ ಬಸ್ ಚಾಲಕನಿಗೆ 1 ವರ್ಷ 6 ತಿಂಗಳ ಸಾಮಾನ್ಯ ಕಾರಾಗೃಹ ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಖಾಸಗಿ ಸಿಟಿ ಬಸ್ ಚಾಲಕ ಧನರಾಜ್ ಶಿಕ್ಷೆಗೊಳಗಾದವನು. 2019ರ ಮಾರ್ಚ್ 27 ರಂದು ನಗರದ ನೀರುಮಾರ್ಗ ಬಳಿ ಧನರಾಜ್ ಬಸ್ ಚಲಾಯಿಸಿಕೊಂಡು ಬರುತ್ತಿದ್ದ. ಈ ಸಂದರ್ಭ ಧನರಾಜ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಸ್ ಚಲಾಯಿಸಿಕೊಂಡು ಬಂದು ಪಾದಚಾರಿ ಮಾಧವ ಮೊಯ್ಲಿ ಎಂಬವರಿಗೆ ಡಿಕ್ಕಿ ಹೊಡೆದಿದ್ದಾನೆ.
ಈ ಸಂದರ್ಭ ನೆಲಕ್ಕೆ ಬಿದ್ದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾಧವ ಮೊಯ್ಲಿಯವರು ಮಾರ್ಚ್ 29 ರಂದು ಮುಂಜಾನೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಸಹಾಯಕ ಪೊಲೀಸ್ ಉಪ ನಿರೀಕ್ಷಕ ಪ್ರವೀಣ್ ನಾಯಕ್ ಹಾಗೂ ಕೃಷ್ಣಾನಂದ ನಾಯಕ್ ಮಾಡಿದ್ದರು. ಈ ಬಗ್ಗೆ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ 7ನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಪದ್ಮಾ ಎಂ. ಅವರು ಆರೋಪಿ ಧನರಾಜ್ ತಪ್ಪಿತಸ್ಥನೆಂದು ಪರಿಗಣಿಸಿ 1 ವರ್ಷ 6 ತಿಂಗಳ ಸಾಮಾನ್ಯ ಕಾರಾಗೃಹ ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದಿಸಿದ್ದರು.
Kshetra Samachara
01/04/2022 11:24 am