ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಲೀಸ್ ಹಾಗೂ ಗ್ರಾಮಸ್ಥರ ಸಂಪರ್ಕ ಸಭೆ ಮುಲ್ಕಿ ಸೀಮೆ ಅರಮನೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಲ್ಕಿ ಠಾಣಾ ಎಎಸ್ಸೈ ಚಂದ್ರಶೇಖರ್ ಮಾತನಾಡಿ ಗ್ರಾಮದ ವ್ಯಾಪ್ತಿಯಲ್ಲಿ ನಾಗಬನ ಸಹಿತ ದೇವ /ದೈವಸ್ಥಾನಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸರ ಜೊತೆ ನಾಗರಿಕರು ಸಹಕರಿಸಬೇಕು. ಗ್ರಾಮದ ಪ್ರತಿಯೊಂದು ಕಾರಣಿಕ ಕ್ಷೇತ್ರದಲ್ಲಿ ಸುಸಜ್ಜಿತ ಸಿಸಿ ಕ್ಯಾಮರಾ ಅಳವಡಿಸುವ ಮುಖಾಂತರ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಸಾಧ್ಯ ಎಂದರು.
ಗ್ರಾಮದಲ್ಲಿ ಬೀಟ್ ಪೊಲೀಸ್ ವ್ಯವಸ್ಥೆ ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಗ್ರಾಮಸ್ಥರ ಸಹಕಾರವಿದ್ದರೆ ಎಲ್ಲವೂ ಸಾಧ್ಯ ಎಂದರು.
ಮುಲ್ಕಿ ಅರಮನೆಯ ಗೌತಮ್ ಜೈನ್ ಮಾತನಾಡಿ ಮುಲ್ಕಿ ಪೊಲೀಸರು ಮತ್ತಷ್ಟು ಕಾರ್ಯಪ್ರವೃತ್ತರಾಗಿ ಕಳ್ಳತನ ಮತ್ತಿತರ ಕೃತ್ಯಗಳನ್ನು ನಡೆಸುವವರನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಂಡು ನಾಗರಿಕರ ವಿಶ್ವಾಸ ಗಳಿಸುವಲ್ಲಿ ಮುಂದಾಗಬೇಕು ಎಂದರು.
ಸಭೆಯಲ್ಲಿ ಮುಲ್ಕಿ ಠಾಣಾ ಪಿಎಸ್ಸೈ ಮಾರುತಿ, ಬೀಟ್ ಪೊಲೀಸ್ ಸೌಮ್ಯ, ನಿವೃತ್ತ ಶಿಕ್ಷಕ ಕೃಷ್ಣ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ನಾಗರಿಕರು ಠಾಣಾ ವ್ಯಾಪ್ತಿಯ ಅನೇಕ ಸಮಸ್ಯೆಗಳನ್ನು ತಿಳಿಸಿ ಪೊಲೀಸರಿಂದ ಸ್ಥಳದಲ್ಲಿ ಪರಿಹಾರ ಕಲ್ಪಿಸಲಾಯಿತು.
Kshetra Samachara
17/11/2021 07:32 pm