ಮಂಗಳೂರು: ನಗರದ ಹೊಯಿಗೆ ಬಜಾರಿನಲ್ಲಿ ಹಲವು ವರ್ಷಗಳಿಂದಲೂ ವಾಸಿಸುತ್ತಿರುವ ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳನ್ನು ಒಕ್ಕಲೆಬ್ಬಿಸದಂತೆ ಒತ್ತಾಯಿಸಿ ಡಿವೈಎಫ್ಐ ಇಂದು ಮೀನುಗಾರಿಕೆ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದೆ.
ಶಿಳ್ಳೆಕ್ಯಾತ ಅಲೆಮಾರಿ ಸಮುದಾಯವು ಮಂಗಳೂರಿನ ಹಲವಾರು ಕಡೆ ನದಿ ತೀರದಲ್ಲಿ ಗುಡಿಸಲು ಕಟ್ಟಿಕೊಂಡು ಹಲವಾರು ವರ್ಷಗಳಿಂದ ವಾಸಿಸುತ್ತಿದೆ. ಇವರು ತೆಪ್ಪದ ಮೂಲಕ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯುವ ಕಾಯಕದೊಂದಿಗೆ ಜೀವನ ನಿರ್ವಹಿಸುತ್ತಿದ್ದಾರೆ. ಅವುಗಳಲ್ಲಿ ಎಂಟು ಕುಟುಂಬ ಕಳೆದ 15-20 ವರ್ಷಗಳಿಂದ ಹೊಯಿಗೆಬಜಾರಿನ ನದಿ ತೀರದಲ್ಲಿ ಗುಡಿಸಲು ನಿರ್ಮಿಸಿ ಜೀವನ ಸಾಗಿಸುತ್ತಿದೆ. ಇವರು ವಾಸಿಸುವ ಗುಡಿಸಲುಗಳಿಗೆ ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಈ ಕುಟುಂಬಗಳನ್ನು ಅಲ್ಲಿಂದ ಕೂಡಲೇ ತೆರವುಗೊಳಿಸಬೇಕೆಂದು ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಒತ್ತಡ ಹೇರುತ್ತಿದ್ದು, ಇದರಿಂದ ಈ ಶಿಳ್ಳೆಕ್ಯಾತ ಕುಟುಂಬಗಳು ಆತಂಕಗೊಳಗಾಗಿದ್ದಾರೆ. ಇವರನ್ನು ಏಕಾಏಕಿ ತೆರವುಗೊಳಿಸಿದರೆ ಅವರ ಮನೆ ಮಂದಿ, ಮಕ್ಕಳೆಲ್ಲರೂ ಬೀದಿಪಾಲಾಗಲಿದ್ದಾರೆ.
ಆದ್ದರಿಂದ ಅವರು ವಾಸಿಸುವ ಸ್ಥಳದಲ್ಲಿ ಮೀನುಗಾರಿಕೆ ಇಲಾಖೆಯ ಯಾವುದೇ ಯೋಜನೆಗಳು ಇಲ್ಲದೆ ಇರುವುದರಿಂದ ಶಿಳ್ಳೆಕ್ಯಾತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಕ್ರಮಕ್ಕೆ ಮುಂದಾಗಬಾರದು. ಅಲ್ಲದೆ, ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರವಷ್ಟೇ ಅಲ್ಲಿಂದ ತೆರವುಗೊಳಿಸಬೇಕೆಂದು ಡಿವೈಎಫ್ಐ ಮನವಿ ಮಾಡಿದೆ.
Kshetra Samachara
21/01/2021 08:51 pm