ಬಂಟ್ವಾಳ: ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಮೂಲಕ 94ಸಿ ಜಾಗ ಒದಗಿಸುವ ಕುರಿತು ಇರುವ ತೊಡಕನ್ನು ನಿವಾರಿಸಬೇಕು, ಕೊರೊನಾ ಸೋಂಕಿತ ಸೀಲ್ ಡೌನ್ ಆಗುವ ಮನೆಗಳಿಗೆ ಗ್ರಾಪಂನಿಂದಲೇ ರೇಶನ್ ಒದಗಿಸಬೇಕು ಮತ್ತು ನನೆಗುದಿಗೆ ಬಿದ್ದಿರುವ ಉಳಿದ ಕಾರ್ಯಗಳ ವಿಲೇವಾರಿಗೆ ಅಧಿಕಾರಿಗಳು ಚುರುಕಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಬಂಟ್ವಾಳ ತಾಪಂ ಸಾಮಾನ್ಯ ಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಒತ್ತಾಯಿಸಿದರು.
ಕಂದಾಯ ಇಲಾಖೆ ಮಂಜೂರು ಮಾಡುವಾಗ ನಿರ್ದಿಷ್ಟ ಮಾನದಂಡ ನೋಡಲಾಗುತ್ತದೆ. 94ಸಿ ಹಕ್ಕುಪತ್ರ ಮಂಜೂರುಗೊಳಿಸುವ ವೇಳೆ ಡೀಮ್ಡ್ ಫಾರೆಸ್ಟ್ ನಂಥ ತೊಡಕುಗಳಿದ್ದರೆ, ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ಮಾಡಲಾಗುವುದು ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ಹೇಳಿದರು.
ತುಂಬೆಯ ನೀರ ಘಟಕದ ಪ್ರಗತಿ ಮತ್ತು ಪಿಲಾತಬೆಟ್ಟುವಿನಲ್ಲಿರುವ ಏಕಲವ್ಯ ಶಾಲೆಗೆ ಜಾಗ ಮಂಜೂರಾತಿಯಲ್ಲಿ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು ಎಂದು ಜಿಪಂ ಸದಸ್ಯ ತುಂಗಪ್ಪ ಬಂಗೇರ ಹೇಳಿದರು.
ತಾಲೂಕಿನಲ್ಲಿ 2708 ಪಾಸಿಟಿವ್ ಪ್ರಕರಣ ವರದಿಯಾಗಿವೆ ಎಂದು ಕೋವಿಡ್ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, 66 ಮಂದಿ ಸಾವನ್ನಪ್ಪಿದ್ದಾರೆ ಎಂದರು. ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 788. ಇವರ ಪೈಕಿ 698 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕಂದಾಯ ಇಲಾಖೆಗಳ ಕಡತ ಮಾಯ ಪ್ರಕರಣಗಳು ಮತ್ತು ಟೇಬಲ್ ನಿಂದ ಟೇಬಲ್ ಗೆ ಕಡತಗಳು ವಿಳಂಬವಾಗಿ ಸಾಗುವ ವಿಚಾರದ ಕುರಿತು ಸದಸ್ಯ ಪ್ರಭಾಕರ ಪ್ರಭು ಪ್ರಸ್ತಾಪಿಸಿದರು.
ವಿವಿಧ ವಿಷಯಗಳ ಬಗ್ಗೆ ಜಿಪಂ ಸದಸ್ಯ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ತುಂಗಪ್ಪ ಬಂಗೇರ, ತಾಪಂ ಸದಸ್ಯರಾದ ಎ.ಆರ್.ಹೈದರ್ ಕೈರಂಗಳ, ಸಂಜೀವ ಪೂಜಾರಿ, ಉಸ್ಮಾನ್ ಕರೋಪಾಡಿ, ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು, ಯಶವಂತ ಪೊಳಲಿ, ಆದಂ ಕುಂಞ, ನಾರಾಯಣ ಶೆಟ್ಟಿ, ಕವಿತಾ ನಾಯ್ಕ, ಮಹಾಬಲ ಆಳ್ವ, ಗೀತಾ ಚಂದ್ರಶೇಖರ್, ಪದ್ಮಾವತಿ ಬಿ. ಮಾತನಾಡಿದರು. ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಕಾರ್ಯನಿರ್ವಹಣಾ ಅಧಿಕಾರಿ ರಾಜಣ್ಣ, ತಹಸೀಲ್ದಾರ್ ರಶ್ಮಿ ಎಸ್.ಆರ್. ವೇದಿಕೆಯಲ್ಲಿದ್ದರು.
Kshetra Samachara
23/09/2020 05:06 pm