ಪುತ್ತೂರು: ಪ್ರತಿ ಮನೆಗೆ, ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಜನಜೀವನ್ ಮಿಷನ್ನಿನ ಮುಖ್ಯ ಗುರಿಯಾಗಿದೆ ಎಂದು ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೇಳಿದರು.
ಪುತ್ತೂರು ತಾಲೂಕಿನ ವಿವಿಧ ಗ್ರಾಪಂಗಳ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ಪುತ್ತೂರು ತಾ.ಪಂ.ನಲ್ಲಿ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಾತ್ಮಕ ನಳ ಸಂಪರ್ಕ, ಕುಡಿಯುವ ನೀರು ಪೂರೈಕೆ ಜಲಜೀವನ್ ಮಿಷನ್ ಯೋಜನೆ ಉದ್ದೇಶವಷ್ಟೇ ಅಲ್ಲದೆ, ಅಂತರ್ಜಲ ಮರುಪೂರಣವೂ ಆಗಿದೆ. ಈಗಾಗಲೇ ತಾಲೂಕಿನಲ್ಲಿ ಇಂಗುಗುಂಡಿಗಳ ನಿರ್ಮಾಣ ಬಹುತೇಕ ಯಶಸ್ವಿ ಕಂಡಿದೆ ಎಂದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಭರತ್ ಮಾತನಾಡಿ, ಜಲಜೀವನ್ ಮಿಷನ್ ಕಾರ್ಯಾನುಷ್ಠಾನ ಮತ್ತು ತಾಂತ್ರಿಕ ಅಡೆತಡೆ ಬಗೆಹರಿಸುವಿಕೆ ಕುರಿತು ಸ್ಪಷ್ಟ ಮಾಹಿತಿ ನೀಡಿದರು. ನೀರು ಪರೀಕ್ಷಾ ವಿಧಾನ ಕುರಿತು ತಜ್ಞರಾದ ಕೃಷ್ಣ ಪ್ರಾತ್ಯಕ್ಷಿಕೆ ನೀಡಿದರು. ಜಲಜೀವನ್ ಮಿಷನ್ ಧ್ಯೋಯೋದ್ದೇಶಗಳ ಕುರಿತು ಜೆಜೆಎಮ್ ಜಿಲ್ಲಾ ಮುಖ್ಯಸ್ಥ ಶಿವರಾಮ್ ಪಿ.ಬಿ. ಮಾತನಾಡಿದರು. 'ಸ್ವಚ್ಛ ಭಾರತ್' ಜಿಲ್ಲಾ ಐಇಸಿ ಡೊಂಬಯ್ಯ, ತ್ಯಾಜ್ಯ ವಿಂಗಡನೆ ಬಗ್ಗೆ ಅರಿವು ಮೂಡಿಸಿದರು. ಜಲಜೀವನ್ ಮಿಷನ್ ಅಡಿಯಲ್ಲಿ ಹಮ್ಮಿಕೊಂಡ ಚಟುವಟಿಕೆಗಳ ಕುರಿತು ಡಬ್ಲ್ಯೂಎಸ್ ಇ ಎಂಜಿನಿಯರ್ ಅಶ್ವಿನ್ ಕುಮಾರ್ ಮತ್ತು ಜಿಲ್ಲಾ ಐಇಸಿ ಮಹಾಂತೇಶ್ ಹಿರೇಮಠ್ ತಿಳಿಸಿದರು. ಜೆಜೆಎಮ್ ಸಿಬ್ಬಂದಿ ದಯಾನಂದ ಮಯ್ಯಾಳ ಮತ್ತು ಈಶ್ವರ್ ಸಹಕರಿಸಿದರು .ದ.ಕ. ಜಿಪಂ, ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪುತ್ತೂರು ತಾಪಂ ಮತ್ತು ಸಮುದಾಯ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತರಬೇತಿಯಲ್ಲಿ ವಿವಿಧ ಗ್ರಾಪಂಗಳ ಸುಮಾರು 150 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
Kshetra Samachara
29/01/2021 07:11 pm