ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ ಪುರಸಭೆಯ ಮೊದಲ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ವಿತರಣೆಯದ್ದೇ ಸದ್ದು

ಬಂಟ್ವಾಳ: ಕುಡಿಯುವ ನೀರಿಗೆ ಸಮಸ್ಯೆ, ಪೈಪ್ ಲೈನ್ ಸಮಸ್ಯೆ, ಅದರಿಂದಾಗಿ ರಸ್ತೆ ಹಾಳಾಗಿರುವುದು, ಹಳೇ ಲೈನ್ ನಲ್ಲೂ ನೀರು ಹರಿಯುತ್ತಿರುವುದು, ಹೊಸ ಕನೆಕ್ಷನ್ ಗಿರುವ ಗೊಂದಲ, ನೀರಿನ ಬಿಲ್ ನ ಗೊಂದಲ ಹಾಗೂ ಇದನ್ನೆಲ್ಲಾ ಯಾರಲ್ಲಿ ಪ್ರಶ್ನಿಸಬೇಕು ಎಂದು ಕಳೆದ ಕೆಲ ತಿಂಗಳುಗಳಿಂದ ಪುರಸಭೆಯ ಚುನಾಯಿತ ಪ್ರತಿನಿಧಿಗಳನ್ನು ಕಾಡುತ್ತಿದ್ದ ಈ ಸಮಸ್ಯೆಗಳೆಲ್ಲಾ ಪ್ರಶ್ನಾರೂಪದಲ್ಲಿ ಇಂದು ಗುರುವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕೇಳಲಾಯಿತು.

ಸಹಾಯಕ ಎಂಜಿನಿಯರ್ ಶೋಭಾಲಕ್ಷ್ಮೀ ಅವರ ಬಳಿ ಪಕ್ಷಬೇಧ ಮರೆತು ಸದಸ್ಯರು ನೀರಿನ ಸಮಸ್ಯೆಗಳು ಹಾಗೂ ಅದಕ್ಕೆ ಸರಿಯಾಗಿ ದೊರಕದ ಸ್ಪಂದನೆ ಕುರಿತು ವಿವರಿಸಿದರು.

ಬಳಿಕ ಅಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿ, ಬಂಟ್ವಾಳ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಮೊದಲ ಹಂತದಲ್ಲೇ ಗೊಂದಲಗಳು ಇರುವ ಕಾರಣ ಜನರ ದೂರುಗಳಿಗೆ ಸಮರ್ಪಕವಾಗಿ ಸ್ಪಂದಿಸಿದ ಬಳಿಕವಷ್ಟೇ ಎರಡನೇ ಹಂತದ ಯೋಜನೆಗೆ ಒಪ್ಪಿಗೆ ನೀಡಲಾಗುವುದೆಂದು ತಿಳಿಸಿದರು.

ಎರಡನೇ ಹಂತದ ಕುಡಿಯುವ ನೀರಿನ ವಿತರಣಾ ಕೊಳವೆ ಮಾರ್ಗಗಳನ್ನು ಅಳವಡಿಸುವ ಕಾಮಗಾರಿಯ ಅಂದಾಜು ಪಟ್ಟಿಯ ಮಂಜೂರಾದ ಮತ್ತು ಉದ್ಧೃತಾ ಅಂದಾಜುಪಟ್ಟಿಗೆ ಮೇಲುರುಜು ಮಾಡುವ ಕುರಿತು ಕ.ನ.ನೀ.ಸ. ಮತ್ತು ಒ.ಚ.ಮಂಡಳಿ ವಿಭಾಗದ ಕಾರ್ಯಪಾಲಕ ಅಭಿಯಂತರರ ಪತ್ರದ ಕುರಿತು ನಡೆದ ಚರ್ಚೆಯಲ್ಲಿ ಸ್ಪಷ್ಟ ಸೂಚನೆ ನೀಡಿದ ಅಧ್ಯಕ್ಷರು, ಮಂಡಳಿಯ ಮತ್ತು ಪುರಸಭೆಯ ಅಧಿಕಾರಿಗಳು ಒಂದು ತಿಂಗಳೊಳಗೆ ಜಂಟಿ ಸರ್ವೆ ನಡೆಸಿ ಸಮಸ್ಯೆಗಳ ಅಧ್ಯಯನ ನಡೆಸಬೇಕು. ಬಳಿಕ ಆ ವರದಿಯನ್ನು ಮುಂದಿನ ಕಲಾಪದ ವೇಳೆ ಮಂಡಿಸಬೇಕು.

ಸರ್ವೆ ಸಂದರ್ಭ ಎಲ್ಲ ವಾರ್ಡುಗಳ ಸದಸ್ಯರ ಅಹವಾಲು ಆಲಿಸಿ ಸಮಗ್ರ ವರದಿಯನ್ನು ಒದಗಿಸಬೇಕು, ಸಾರ್ವಜನಿಕರ ಪ್ರತಿನಿಧಿಗಳ ಸಂಶಯಗಳನ್ನು ಪರಿಹರಿಸಬೇಕು ಎಂದು ಹೇಳಿದರು. ಈ ಕುರಿತ ನಿರ್ಣಯವನ್ನು ಪುರಸಭೆಯಲ್ಲಿ ಮಾಡಲಾಯಿತು.

ಬಾರೆಕಾಡು ಆಶ್ರಯ ಕಾಲೊನಿಗೆ ಹಕ್ಕುಪತ್ರ ದೊರಕದ ವಿಚಾರ, ಕಸ ಸಂಗ್ರಹ ಕುರಿತು ಹಿಂದಿನ ಮೀಟಿಂಗ್ ನಲ್ಲಿ ಮಾಡಿದ ನಿರ್ಣಯ ಡಬ್ಬಲ್ ಟ್ಯಾಕ್ಸ್ ವಿಧಿಸಿ ಡೋರ್ ನಂಬರ್ ನೀಡುವ ವಿಚಾರ, ಬೋಗೋಡಿ ಪರಿಸರದಲ್ಲಿ ಗ್ಯಾಸ್ ಬಂಕ್ ಗೆ ಅನುಮತಿ, ರಾ.ಹೆ.ಅಗಲೀಕರಣ ವೇಳೆ ಗೂಡಂಗಡಿ ತೆರವು ವಿಚಾರ, ಪ.ಜಾತಿ, ಪಂಗಡಕ್ಕೆ ವಿದ್ಯುತ್ ಬಿಲ್ ಮನ್ನಾ ಸಹಿತ ಹಲವು ವಿಚಾರಗಳು ಚರ್ಚೆಗೆ ಬಂದವು.

ಬಿಜೆಪಿಯಿಂದ ಹಿರಿಯ ಸದಸ್ಯ ಎ. ಗೋವಿಂದ ಪ್ರಭು, ದೇವಕಿ, ವಿದ್ಯಾವತಿ, ಕಾಂಗ್ರೆಸ್ ಪಕ್ಷದಿಂದ ಪಿ.ರಾಮಕೃಷ್ಣ ಆಳ್ವ, ಲುಕ್ಮಾನ್, ಬಿ.ವಾಸು ಪೂಜಾರಿ, ಗಂಗಾಧರ, ಮಹಮ್ಮದ್ ನಂದರಬೆಟ್ಟು, ಅಬುಬಕ್ಕರ್ ಸಿದ್ದಿಕ್ ಗುಡ್ಡೆಯಂಗಡಿ, ಜನಾರ್ದನ ಚಂಡ್ತಿಮಾರ್, ಎಸ್.ಡಿ.ಪಿ.ಐನಿಂದ ಸದಸ್ಯರಾದ ಮುನೀಶ್ ಆಲಿ, ಝೀನತ್ ಫಿರೋಜ್, ಸಂಶದ್ ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

11/12/2020 09:09 am

Cinque Terre

5.84 K

Cinque Terre

0

ಸಂಬಂಧಿತ ಸುದ್ದಿ