ಮಂಗಳೂರು : ಅಸಹಾಯಕ ಮಹಿಳೆಯೋರ್ವರು ಮೃತಪಟ್ಟ ಪತಿಯ ಅಂತ್ಯಸಂಸ್ಕಾರ ನಡೆಸಲು ದಿಕ್ಕು ತೋಚದೆ ಕುಳಿತಿರುವಾಗ ಧಾವಿಸಿದ ಎಂ.ಫ್ರೆಂಡ್ಸ್ ಕಾರುಣ್ಯ ತಂಡ ಅಂತ್ಯ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದ ಘಟನೆ ನಿನ್ನೆ ಮಂಗಳೂರಿನಲ್ಲಿ ನಡೆದಿದೆ.
ಭಟ್ಕಳ ಮೂಲದ 39ರ ಹರೆಯದ ಪರಮೇಶ್ವರಿ ಎಂಬವರ ಪತಿ ಶ್ರೀಧರ್ ಕ್ಯಾನ್ಸರ್ ಮಹಾಮಾರಿಗೆ ತುತ್ತಾಗಿ ನಿನ್ನೆ ಮಂಗಳೂರಿನ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತಮ್ಮವರೆಂದು ಯಾರೂ ಇಲ್ಲದ ನಿರ್ಗತಿಕ ಪರಮೇಶ್ವರಿಯವರು ದಿಕ್ಕು ತೋಚದೆ 3 ವರ್ಷದ ಪುಟ್ಟ ಮಗುವಿನೊಂದಿಗೆ ಐಸಿಯು ಹೊರಗಡೆ ಅಸಹಾಯಕರಾಗಿ ಕುಳಿತು ಅಳುತ್ತಿದ್ದರು.
ಪತಿಯ ಮೃತದೇಹವನ್ನು ಏನು ಮಾಡಬೇಕೆಂದು ತಿಳಿಯದೆ ಮಹಿಳೆಯೋರ್ವರು ಅಸಹಾಯಕರಾಗಿದ್ದಾರೆ ಎಂದು ವೆನ್ಲಾಕ್ ಸಿಬ್ಬಂದಿ ಎಂ.ಫ್ರೆಂಡ್ಸ್ ಕಾರುಣ್ಯ ತಂಡಕ್ಕೆ ಮಾಹಿತಿ ನೀಡಿದೆ.
ತಿಳಿದ ತಕ್ಷಣ ಸಹಾಯಕ್ಕೆ ಧಾವಿಸಿದ ಎಂ.ಫ್ರೆಂಡ್ಸ್ ಕಾರುಣ್ಯ ತಂಡ 'ಫ್ರೆಂಡ್ಸ್ ಫಾರ್ ಪೂವರ್' ಸಂಸ್ಥೆಯ ಆಂಬುಲೆನ್ಸ್ ಮೂಲಕ ಮೃತದೇಹವನ್ನು ನಂದಿಗುಡ್ಡೆ ರುದ್ರಭೂಮಿಗೆ ಸಾಗಿಸಿ ಅಂತ್ಯಸಂಸ್ಕಾರ ನಡೆಸಿದೆ.
ಪರಮೇಶ್ವರಿ ಭಟ್ಕಳದವರಾಗಿದ್ದು, ಗಂಡ ಶ್ರೀಧರ್ ದಾವಣಗೆರೆ ಮೂಲದವರು. ಇಬ್ಬರೂ ಕುಂದಾಪುರದಲ್ಲಿ ಕೂಲಿ ಕೆಲಸದಲ್ಲಿದ್ದರು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕಾವಳಕಟ್ಟೆಯಲ್ಲಿನ ತೋಟದ ಕೆಲಸಕ್ಕೆ ಸೇರಿದ್ದರು. ಕಳೆದ ಎಂಟು ತಿಂಗಳಿಂದ ಏನಾದರೂ ತಿಂದರೆ ವಾಂತಿ ಮಾಡುತ್ತಿದ್ದ ಶ್ರೀಧರ್ ಲೋಕಲ್ ವೈದ್ಯರ ಔಷಧಿ ಸೇವಿಸುತ್ತಿದ್ದರು. ಆದರೆ ರೋಗ ಉಲ್ಬಣಗೊಂಡಾಗ 2021 ಜನವರಿ 1 ರಂದು ವೆನ್ಲಾಕ್ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯರು ತಪಾಸಣೆ ನಡೆಸಿದಾಗ ಶ್ರೀಧರ್ ಗಂಟಲು ಕ್ಯಾನ್ಸರ್ ಗೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿತ್ತು. ವೆನ್ಲಾಕ್ ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದ ಶ್ರೀಧರ್ ಚಿಕಿತ್ಸೆ ಫಲಿಸದೆ ನಿನ್ನೆ ಮಧ್ಯಾಹ್ನ ಮೃತಪಟ್ಟಿದ್ದರು.
Kshetra Samachara
13/01/2021 09:39 am