ಮುಲ್ಕಿ: ಮುಲ್ಕಿ ಬಳಿಯ ಕು ಬೆವೂರು ಸಮೀಪ ಕೃಷಿ ಕಾಯಕ ನಡೆಸುತ್ತಿರುವಾಗ ಚೂರಿ ತಾಗಿ ತೀವ್ರ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ವೈದ್ಯರು ಸಹಿತ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ ವಹಿಸಿದ್ದು, ಉಡಾಫೆ ಉತ್ತರ ನೀಡಿದ್ದಾರೆ ಎಂದು ಗಾಯಾಳು ಹೆಜಮಾಡಿ ಪಂಚಾಯತ್ ಮಾಜಿ ಸದಸ್ಯ ಪ್ರಾಣೇಶ್ ಗಂಭೀರ ಆರೋಪ ಮಾಡಿದ್ದಾರೆ.
ಹೆಜಮಾಡಿ ಗ್ರಾಪಂ ಮಾಜಿ ಸದಸ್ಯ ಪ್ರಾಣೇಶ್, ಕೃಷಿ ಜೊತೆಗೆ ಸೀಯಾಳ ಕೊಯ್ಯುವ ವೃತ್ತಿ ನಡೆಸುತ್ತಿದ್ದು ಭಾನುವಾರ ಮುಲ್ಕಿ ಸಮೀಪದ ಕುಬೆವೂರು ಬಳಿಯ ತೋಟದಲ್ಲಿ ಸೀಯಾಳ ತೆಗೆಯುತ್ತಿದ್ದಾಗ ಕೈಗೆ ಆಕಸ್ಮಿಕ ಚೂರಿ ಇರಿತವಾಗಿದ್ದು ಗಂಭೀರ ಗಾಯಗೊಂಡಿದ್ದಾರೆ.
ಕೂಡಲೇ ಅವರು ಪಡುಪಣಂಬೂರು ಗ್ರಾಪಂ ಮಾಜಿ ಸದಸ್ಯ ವಿನೋದ್ ಬೆಳ್ಳಾಯರು ಅವರಿಗೆ ತಿಳಿಸಿದ್ದು, ಅವರು ಮುಲ್ಕಿ ಸರಕಾರಿ ಆಸ್ಪತ್ರೆ ವೈದ್ಯರಿಗೆ ಮಾಹಿತಿ ನೀಡಿದ್ದು, ಅವರು ಕೂಡಲೇ ಸ್ಪಂದಿಸಿ ಆಪರೇಷನ್ ಆಗಬೇಕೆಂದು ತಿಳಿಸಿ, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವೆನ್ಲಾಕ್ ಆಸ್ಪತ್ರೆಗೆ ಆಯುಷ್ಮಾನ್ ಕಾರ್ಡ್ ಮೂಲಕ ಕೂಡಲೇ ಚಿಕಿತ್ಸೆಗೆ ತೆರಳಲು ವ್ಯವಸ್ಥೆ ಮಾಡಿದ್ದಾರೆ.
ಅಲ್ಲಿಂದ ಆಂಬ್ಯುಲೆನ್ಸ್ ನಿಂದ ಗಾಯಾಳುವನ್ನು ವೆನ್ಲಾಕ್ ಗೆ ದಾಖಲಿಸಲಾಗಿತ್ತು, ಆದರೆ, ವೆನ್ಲಾಕ್ ವೈದ್ಯರು ಹಾಗೂ ಸಿಬ್ಬಂದಿಗ ಇಲ್ಲಿ ಆಯುಷ್ಮಾನ್ ಕಾರ್ಡ್ ಚಿಕಿತ್ಸೆ ವ್ಯವಸ್ಥೆ ಇಲ್ಲ, ದೇರಳಕಟ್ಟೆಗೆ ಹೋಗಬೇಕೆಂದು ಉಡಾಫೆ ಉತ್ತರ ನೀಡಿದ್ದಾರೆ.
ಅಲ್ಲದೆ, ಚಿಕಿತ್ಸೆಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರಾಣೇಶ್ ಅಳಲು ತೋಡಿಕೊಂಡಿದ್ದಾರೆ.
ವೆನ್ಲಾಕ್ ನಲ್ಲಿ ಸುಮಾರು ಹೊತ್ತಿನ ಬಳಿಕವೂ ಚಿಕಿತ್ಸೆ ನೀಡದಿರುವುದನ್ನು ಹಾಗೂ ಇನ್ನೊಂದೆಡೆ ಕೈಯಿಂದ ವಿಪರೀತ ರಕ್ತಸ್ರಾವವಾಗುತ್ತಿದ್ದರಿಂದ ಪ್ರಾಣೇಶ್, ಕೂಡಲೇ ಅಲ್ಲಿಂದ ಏಕಾಏಕಿ ವಾಪಸಾಗಿ ಉಡುಪಿಯ ಖಾಸಗಿ ಹೈಟೆಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಸೂಕ್ತ ಚಿಕಿತ್ಸೆ ಮೂಲಕ ಕೈಗೆ ಆಪರೇಷನ್ ಮಾಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಸೂಕ್ತ ಚಿಕಿತ್ಸೆ ನೀಡದಿರುವ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರಾಣೇಶ್, ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುತ್ತಿದ್ದಂತೆ ಪ್ರಥಮವಾಗಿ ಕೊರೊನಾ ಪರೀಕ್ಷೆ ನಡೆಸಿದ್ದು, ಪಾಸಿಟಿವ್ ಬಂದಿದ್ದರೆ ಅಧೋ ಗತಿಯಾಗುತ್ತಿತ್ತು ಎಂದು ಬೇಸರಿಸಿದ್ದಾರೆ.
ಓರ್ವ ಬಿಜೆಪಿ ಕಾರ್ಯಕರ್ತನಾಗಿ, ಪಂ. ಸದಸ್ಯನಾಗಿ, ಉಡುಪಿ ಜಿಲ್ಲಾ ಬಿಜೆಪಿಯ ಅಡಿಕೆ, ತೆಂಗು ಬೆಳೆಗಾರರ ಪ್ರಕೋಷ್ಠ ಸಂಚಾಲಕರಾಗಿರುವ ಪ್ರಾಣೇಶ್ , ತನಗೇ ಹೀಗೆ ಆದರೆ ವೆನ್ಲಾಕ್ ಗೆ ಆಗಮಿಸುವ ಸಾಮಾನ್ಯ ಕೃಷಿಕರ, ಬಡವರ ಗತಿಯೇನು? ಎಂದು ಆತಂಕ ವ್ಯಕ್ತಪಡಿಸಿದ ಅವರು, ಈ ಘಟನೆ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ದೂರು ನೀಡಲಾಗಿದೆ ಎಂದರು.
Kshetra Samachara
20/10/2020 10:20 am