ಮುಲ್ಕಿ: ಬೀದಿ ಬದಿ ವ್ಯಾಪಾರಸ್ಥರ ಆತ್ಮನಿರ್ಭರ್ ಯೋಜನೆಯಡಿ ಸರಕಾರ ನಿಗದಿ ಪಡಿಸಿದ ಗುರಿ ಮೀರಿ ಸಾಧನೆಗೈದು ಜಿಲ್ಲೆಗೇ ಪ್ರಥಮ ಸ್ಥಾನಿಯಾಗಿದೆ ಎಂದು ಡೇ ನಲ್ಮ್ ಯೋಜನೆಯ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ ಹೇಳಿದ್ದಾರೆ.
ಮುಲ್ಕಿ ಸಮುದಾಯ ಭವನದಲ್ಲಿ ಶುಕ್ರವಾರ ರಾಷ್ಟ್ರೀಯ ಜೀವನೋಪಾಯಗಳ ಅಭಿಯಾನ(ಡೇ ನಲ್ಮ್)ದಡಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿಯಲ್ಲಿ ಡಿಜಿಟಲ್ ವಹಿವಾಟಿನ ಕುರಿತು ಮಾಹಿತಿ ತರಬೇತಿ ಕಾರ್ಯಕ್ರಮದಲ್ಲಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ ಮಾತನಾಡಿ, ಸರಕಾರ ಒಟ್ಟು ಜನಸಂಖ್ಯೆಯ ಶೇ. ಒಂದರಷ್ಟು ಗುರಿ ನಿಗದಿ ಪಡಿಸಿದ್ದು, ಅದರಂತೆ 183 ಫಲಾನುಭವಿಗಳನ್ನು ಗುರುತಿಸಬೇಕಿತ್ತು. ಆದರೆ ನಗರಾಡಳಿತವು 245 ಅರ್ಜಿಗಳ ಪೈಕಿ 186 ಮಂದಿಗೆ ಸರಕಾರದ ಸಾಲಸೌಲಭ್ಯ ಒದಗಿಸಿಕೊಟ್ಟು ಸಾಧನೆಗೈದಿದೆ. ಎಲ್ಲರಿಗೂ ತಲಾ 10 ಸಾವಿರ ರೂ. ಸಾಲ ಹಾಗೂ ಸಹಾಯಧನ ದೊರೆಯಲಿದೆ ಎಂದರು.
ಡೇ ನಲ್ಮ್ ವ್ಯವಸ್ಥಾಪಕ ವಿಶ್ವನಾಥ್ ಅವರು ಬೀದಿ ಬದಿ ವ್ಯಾಪಾರಿಗಳ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ ಶಾಖಾಧಿಕಾರಿ ಕಾರ್ತಿಕ್ ಮತ್ತು ಬ್ಯಾಂಕ್ ಆಫ್ ಬರೋಡಾದ ಶಾಖಾಧಿಕಾರಿ ಎಚ್. ರವಿಕುಮಾರ್ ಡಿಜಿಟಲ್ ವ್ಯವಹಾರ ಕುರಿತು ಮಾಹಿತಿ ನೀಡಿದರು.
ನಪಂ ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ದಯಾವತಿ ಅಂಚನ್, ಮಂಜುನಾಥ ಕಂಬಾರ್, ಪುತ್ತುಬಾವ ಉಪಸ್ಥಿತರಿದ್ದರು. ನ.ಪಂ ಮುಖ್ಯಾಧಿಕಾರಿ ಪಿ. ಚಂದ್ರ ಪೂಜಾರಿ ಸ್ವಾಗತಿಸಿದರು. ನಪಂ ಸಿಎಒ ಮತ್ತಾಡಿ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
15/01/2021 08:56 pm