ಗ್ರಾಮೀಣ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡುವ ಹಾಗೂ ಸ್ಥಳದಲ್ಲೇ ಉತ್ತರ ನೀಡುವ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯಕ್ಕೆ ಹೆಚ್ಚು ಮಹತ್ವ ಇದೆ. ಗ್ರಾಮ ವಾಸ್ತವ್ಯದಲ್ಲಿ ಕಂದಾಯ ಇಲಾಖೆ ಸಹಿತ ಜಿಲ್ಲಾಡಳಿತದ ಬಹುತೇಕ ಎಲ್ಲ ಇಲಾಖಾ ಅಧಿಕಾರಿಗಳಿದ್ದು, ಗ್ರಾಮ ವ್ಯಾಪ್ತಿಯಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಇಂತಹ ಕಾರ್ಯಕ್ರಮಗಳ ಸದ್ಬಳಕೆಯಾಗಬೇಕು. ನಾಗರಿಕ ಸಮಸ್ಯೆಗಳಿಗೆ ಸುಲಭ ರೂಪದಲ್ಲಿ ಪರಿಹಾರ ನೀಡಲು ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಹೇಳಿದರು. ಅವರು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮೊಗರು ಗ್ರಾಮದ ಕುಕ್ಕಟ್ಟೆಯ ಖಾಸಗಿ ಸಭಾಗೃಹವೊಂದರಲ್ಲಿ ಶುಕ್ರವಾರ ಆಯೋಜಿಸಲಾದ 'ಡಿ.ಸಿ ಗ್ರಾಮ ವಾಸ್ತವ್ಯ' ಕಾರ್ಯಕ್ರಮದಲ್ಲಿ ಮಾತನಾಡಿದರು.
ವೃದ್ಧಾಪ್ಯ ವೇತನ ಹಾಗೂ ಸರ್ಕಾರ ಇತರ ಯೋಜನೆಗಳಿಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಮನೆಮನೆಗಳಿಗೆ ತೆರಳಿ ಮಾಹಿತಿ ನೀಡಬೇಕು ಹಾಗೂ ಅರ್ಹರನ್ನು ಹುಡುಕಿ ಫಲಾನುಭವಿಗಳ ಯಾದಿಯಲ್ಲಿ ಸೇರಿಸಿಕೊಳ್ಳುವ ಕೆಲಸ ಅಧಿಕಾರಿಗಳಿಂದ ಆಗಬೇಕು. ಹೀಗಿದ್ದರೆ ಮಾತ್ರ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಲಿದೆ ಎಂದರು. ಕೆಲವು ದೂರುಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಪ್ರಯತ್ನಿಸಿದ ಡಿ.ಸಿಯವರು, ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗ್ರಾಮ ವಾಸ್ತವ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ಗುರುಪುರ-ಕೈಕಂಬ ನಾಡ ಕಚೇರಿಯ ಉಪ-ತಹಶೀಲ್ದಾರ್ ಶಿವಪ್ರಸಾದ್ ನಿರೂಪಿಸಿದರು. ಸಹಾಯಕ ಆಯುಕ್ತ ಮದನ್ ಮೋಹನ್, ಜಿಪಂ ಸಿಇಒ ಡಾ. ಕುಮಾರ್, ತಾಪಂ ಇಒ ನಾಗರಾಜ್, ಗಂಜಿಮಠ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಉಪಾಧ್ಯಕ್ಷೆ ಕುಮುದಾ ನಾಯ್ಕ್, ವಿವಿಧ ಇಲಾಖಾ ಅಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
28/05/2022 04:49 pm