ಯಕ್ಷಗಾನದಲ್ಲಿ ಪಾತ್ರಧಾರಿಗಳು ಒಂದೇ ಒಂದು ಇಂಗ್ಲಿಷ್ ಪದ ನುಸುಳದಂತೆ ಅಚ್ಚಗನ್ನಡದಲ್ಲಿ ಅಸ್ಕಲಿತವಾಗಿ ಸಂಭಾಷಿಸುತ್ತಾರೆ. ಆದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಲೂ ಸ್ಪಷ್ಟ ಕನ್ನಡವು ಗಟ್ಟಿಯಾಗಿ ಉಳಿಯಲು ಯಕ್ಷಗಾನವೂ ಕಾರಣ ಎಂಬೊಂದು ಮಾತು ಪ್ರಚಲಿತದಲ್ಲಿದೆ. ಆದರೆ ಸಂಪೂರ್ಣ ಇಂಗ್ಲಿಷ್‌ನಲ್ಲಿಯೇ ಸಂಭಾಷಣೆಯಿರುವ ವಿಭಿನ್ನ ಯಕ್ಷಗಾನ ಪ್ರಯೋಗವೊಂದು ಮಂಗಳೂರಿನಲ್ಲಿ ನಡೆಯಿತು.
ಸಾಮಾನ್ಯವಾಗಿ ಕನ್ನಡ ಹಾಗೂ ತುಳು ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನವು ನಡೆಯುತ್ತಿರುತ್ತದೆ. ಆದರೆ ಈ ಎರಡೂ ಭಾಷೆಯ ಅರಿವಿಲ್ಲದವರಿಗೆ ಯಕ್ಷಗಾನದ ಕಂಪನ್ನು ಪಸರಿಸಬೇಕೆನ್ನುವ ಉದ್ದೇಶದಿಂದ ಮಂಗಳೂರಿನ ದಿ.ಪಿ.ವಿ.ಐತಾಳ್ ಎಂಬವರು 4 ದಶಕಗಳ ಹಿಂದೆಯೇ ಯಕ್ಷಗಾನದಲ್ಲಿ ಆಂಗ್ಲ ಭಾಷಾ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿದ್ದರು. ಇದೀಗ ಅವರ ಜನ್ಮಶತಾಬ್ದಿ ವರ್ಷಾಚರಣೆಯ ಅಂಗವಾಗಿ ಯಕ್ಷನಂದನ ಸಂಸ್ಥೆ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಆಂಗ್ಲ ಯಕ್ಷಗಾನ ಪ್ರಯೋಗವನ್ನು ನಡೆಸಿತು. ವಿಶೇಷವೆಂದರೆ ಈ ಪ್ರಯೋಗದಲ್ಲಿ ಪಿ.ವಿ.ಐತಾಳ್ ಅವರೇ ಆಂಗ್ಲ ಭಾಷೆಯಲ್ಲಿ ಸಂಭಾಷಣೆ ರಚಿಸಿರುವ 4 ಯಕ್ಷಗಾನಗಳು ಪ್ರದರ್ಶನಗೊಂಡಿತು. 1981ರ ಸಂದರ್ಭ 'ಬ್ರಹ್ಮಕಪಾಲ' ಪ್ರಸಂಗಕ್ಕೆ ಮೊದಲ ಬಾರಿಗೆ ದಿ.ಪಿ.ವಿ.ಐತಾಳ್ ಆಂಗ್ಲ ಭಾಷೆಯಲ್ಲಿ ಸಂಭಾಷಣೆ ಬರೆದಿದ್ದರು. ಈ ಯಶಸ್ಸಿನ ಸ್ಪೂರ್ತಿಯಿಂದ ಮತ್ತಷ್ಟು ಪ್ರಸಂಗಗಳಿಗೆ ಇಂಗ್ಲಿಷ್ ಸಂಭಾಷಣೆ ರಚಿಸಿದ್ದರು. ಇದೀಗ ಅವರ ಬ್ರಹ್ಮಕಪಾಲ ಸೇರಿದಂತೆ, ದಕ್ಷಯಜ್ಞ - ಗಿರಿಜಾಕಲ್ಯಾಣ, ಶ್ರೀಕೃಷ್ಣ ಪಾರಿಜಾತ - ನರಕಾಸುರ ಮೋಕ್ಷ, ಸೈರಂದ್ರಿ - ಕೀಚಕ ಯಕ್ಷಗಾನ ಪ್ರಯೋಗ ಗೊಂಡಿತು.
ಯಕ್ಷನಂದನ ಸಂಸ್ಥೆಯ ಮೂರನೇ ತಲೆಮಾರಿನ ವಿದ್ಯಾರ್ಥಿಗಳಿಂದ ಈ ಇಂಗ್ಲಿಷ್ ಯಕ್ಷಗಾನ ಪ್ರಯೋಗ ನಡೆಯಿತು. ಸುಮಾರು 40 ಮಂದಿ ವಿದ್ಯಾರ್ಥಿಗಳು ಈ ಪ್ರಯೋಗದಲ್ಲಿ ಪಾತ್ರ ವಹಿಸಿದ್ದರು. ಇವರಲ್ಲಿ ಅರ್ಧದಷ್ಟು ಮಂದಿ ಆಂಗ್ಲ ಯಕ್ಷಗಾನ ಪ್ರಯೋಗಕ್ಕೆ ಹೊಸಬರಾಗಿದ್ದಾರೆ. ಈ ಮೂಲಕ ಆಂಗ್ಲ ಪ್ರಯೋಗಕ್ಕೆ ಕಲಾವಿದರ ಕೊರತೆ ನೀಗಲಿದೆ. ಯಕ್ಷಗಾನವೆಂಬ ಕರಾವಳಿಯ ಶ್ರೀಮಂತ ಕಲೆಯು ಕನ್ನಡೇತರರಿಗೂ, ಸೀಮೋಲ್ಲಂಘನವಾಗಿ ವಿದೇಶಿಯರನ್ನು ತಲುಪಬೇಕೆನ್ನುವ ದಿ.ಪಿ.ವಿ.ಐತಾಳರ ಪ್ರಯತ್ನವನ್ನು ನಿಜವಾಗಿಯೂ ಶ್ಲಾಘನೀಯ. ಇದೀಗ ಮತ್ತೆ ಈ ಪ್ರಸಂಗಗಳು ರಂಗವೇರಿ ಹೊಸ ತಲೆಮಾರಿನ ಕಲಾವಿದರ ಮುಖೇನ ಪ್ರದರ್ಶನಗೊಂಡು ಮತ್ತೆ ಇಂತಹ ಪ್ರಯೋಗಕ್ಕೆ ವೇದಿಕೆ ದೊರಕಿದಂತಾಗಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
PublicNext
20/06/2022 04:45 pm