ಕಟೀಲು :ಧ್ವನಿಪೂರ್ಣವಾಗಿ ಹಾಡುತ್ತಿದ್ದ ದಾಮೋದರ ಮಂಡೆಚ್ಛರ ಹೆಸರಿನಲ್ಲಿ ಕಟೀಲಮ್ಮನ ಸನ್ನಿಧಿಯಲ್ಲಿ ಸಿಕ್ಕ ಪ್ರಸಾದ ರೂಪದ ಪ್ರಶಸ್ತಿ ಧನ್ಯತೆಯನ್ನು ಕೊಟ್ಟಿದೆ ಎಂದು ಖ್ಯಾತ ಭಾಗವತ ದಿನೇಶ ಅಮ್ಮಣ್ಣಾಯ ಹೇಳಿದರು.ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ದಾಮೋದರ ಮಂಡೆಚ್ಛ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕಟೀಲು ಶ್ರೀ ದೇವಿಯ ಶೇಷ ವಸ್ತ್ರ,ರೂ. 10 ಸಾವಿರ ನಗದು, ಪ್ರಶಸ್ತಿ ಫಲಕವನ್ನು ನೀಡಿ ಅಮ್ಮಣ್ಣಾಯರನ್ನು ಗೌರವಿಸಲಾಯಿತು.
ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ ಯಕ್ಷಗಾನಕ್ಕೆ ಹೊಸತನವನ್ನು ನೀಡಿದ ಮಂಡೆಚ್ಛರ ಭಾವನಾತ್ಮಕ ಶೈಲಿಯನ್ನು ಕುಬಣೂರು, ಅಮ್ಮಣ್ಣಾಯರು ಮುಂದುವರಿಸಿಕೊಂಡು ಜನಪ್ರಿಯತೆ ಪಡೆದರು ಎಂದರು.
ದೇಗುಲದ ಆಡಳಿತ ಸಮಿತಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ವೇದಿಕೆಯಲ್ಲಿದ್ದರು.
ಶಿಕ್ಷಕ ಸಾಯಿನಾಥ ಶೆಟ್ಟಿ ನಿರೂಪಿಸಿದರು. ಡಾ. ಶ್ರುತಕೀರ್ತಿರಾಜ ವಂದಿಸಿದರು.
ಇದೇ ಸಂದರ್ಭ ಭಾಗವತರಾದ ಕುಬಣೂರು ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ರಚಿತ ಪ್ರಸಂಗಗಳ ಹಾಡುಗಳನ್ನು ಮಹೇಶ್ ಕನ್ಯಾಡಿ, ಭವ್ಯಶ್ರೀ ಮಂಡೆಕೋಲು, ದೇವೀಪ್ರಸಾದ ಆಳ್ವ ಹಾಡಿದರು. ಲಕ್ಷ್ಮೀ ಮಚ್ಚಿನ ಕುಬಣೂರು ಬೊಟ್ಟಿಕೆರೆ ಹಾಗೂ ಪ್ರಸಾದ ಬಲಿಪರ ಸಂಸ್ಮರಣೆಯ ಮಾತುಗಳನ್ನಾಡಿದರು. ಬಳಿಕ ಕುಬಣೂರು ರಚಿತ ಸಾರ್ವಭೌಮ ಸಂಕರ್ಷಣ ಯಕ್ಷಗಾನ ನಡೆಯಿತು.
Kshetra Samachara
10/07/2022 07:41 pm